ಆವಾಗ ಕರಡಿ ಪ್ರತ್ಯಕ್ಷ ಈಗ ಚಿರತೆ !

ಚಿರತೆ ಸೆರೆಗಾಗಿ ಗೆದ್ದಲಮರಿಯಲ್ಲಿ ಬೋನು ಅಳವಡಿಸಿದ ಅರಣ್ಯ ಇಲಾಖೆ ಅಧಿಕಾರಿಗಳು.
ಚಿರತೆ ಸೆರೆಗಾಗಿ ಗೆದ್ದಲಮರಿಯಲ್ಲಿ ಬೋನು ಅಳವಡಿಸಿದ ಅರಣ್ಯ ಇಲಾಖೆ ಅಧಿಕಾರಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಭಯದಲ್ಲಿ ಕಾಲ ಕಳೆಯುತ್ತಿರುವ ಜನತೆ
  • ಹಿರೇಹಳ್ಳದಲ್ಲಿ ನಾಯಿ ಬಲಿ ಪಡೆದ ಚಿರತೆ
ಕಕ್ಕೇರಾ: ಭಾನುವಾರ ರಾತ್ರಿ ವೇಳೆ ಚಿರತೆಯೊಂದು ಕಾಣಿಸಿಕೊಂಡು ಶೆಡ್​ಬಳಿ ಇದ್ದ ನಾಯಿ ಬಲಿ ಪಡೆದ ಟನೆ ಪುರಸಭೆ ವ್ಯಾಪ್ತಿಯ ಹಿರೇಹಳ್ಳದ ಮರ್ಚಿಯೊಂದರಲ್ಲಿ ನಡೆದಿದ್ದು ಇದರಿಂದ ಸಾರ್ವಜನಿಕರು ಭಯದಲ್ಲಿ ಕಾಲ ಕಳೆಯುವಂತಾಗಿದೆ.
ಕೆಲ ದಿನಗಳ ಹಿಂದೆ ಕೊಡೇಕಲ್​ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಈ ಚಿರತೆ ಆಕಳು, ನಾಯಿ, ಮೇಕೆ ಸೇರಿ ಅನೇಕ ಪ್ರಾಣಿಗಳನ್ನು ಬಲಿ ಪಡೆದ ಟನೆ ಮಾಸುವ ಮುನ್ನವೇ ಸಮೀಪದ ಏದಲಭಾವಿ ತಾಂಡಾದ ರಾತ್ರಿ ಸಮಯದಲ್ಲಿ ತಾಂಡಾದ ಕೆಲ ಯುವಕರಿಗೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ಚಿರತೆ ಭಾನುವಾರ ರಾತ್ರಿ ಹಿರೇಹಳ್ಳದ ಶೆಡ್​ವೊಂದರ ಮುಂದೆ ಮಲಗಿದ್ದ ನಾಯಿಯನ್ನು ಬಲಿ ಪಡೆದಿದ್ದು ಸೋಮವಾರ ಅರಣ್ಯ ಇಲಾಖೆ ಅಧಿಕಾರಿ ಹಣಮಂತ್ರಾಯ ಬಿರಾದಾರ ಭೇಟಿ ನೀಡಿ ಪರಿಶೀಲಿಸಿ ಇದು ಚಿರತೆಯ ದಾಳಿಯಿಂದ ನಾಯಿ ಬಲಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಂತರ ಮಾತನಾಡಿದ ಅವರು, ನಾಯಿ ಬಲಿ ಪಡೆದ ಚಿರತೆ ಈ ಹಿಂದೆ ಕೊಡೇಕಲ್​ ವ್ಯಾಪ್ತಿಯಲ್ಲಿ ಕಾಣಿಸಿಕೊಂಡು ಅನೇಕ ಪ್ರಾಣಿಗಳನ್ನು ಬಲಿ ಪಡೆದು ಅವಾಂತರ ದೃಷ್ಟಿ ಮಾಡಿದ ಚಿರತೆಗಾಗಿ ನಾವು ಸೆರೆ ಹಿಡಿಯಲು ಬೋನು ಸೇರಿದಂತೆ ಸಾಕಷ್ಟು ಪರಿಶ್ರಮಪಟ್ಟರೂ ಸೆರೆ ಸಿಗದೇ ಗುಡ್ಡಗಾಡು ಮತ್ತು ಪೊದೆಯೊಳಗೆ ನುಸುಳಿ ರಾತ್ರಿ ವೇಳೆ ಪ್ರಾಣಿಗಳನ್ನು ಬಲಿ ಪಡೆಯುತ್ತಿದ್ದು ನಾಗರೀಕರು ಜಾಗೃತರಾಗಿರಬೇಕು. ಚಿರತೆ ಕಾಣಿಸಿಕೊಂಡಲ್ಲಿ ಅರಣ್ಯ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ಯಾದಗಿರಿ ಪ್ರಾದೇಶಿಕ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ ಕನಕಟ್ಟ, ವಲಯ ಅರಣ್ಯ ಅಧಿಕಾರಿ ಭಾಗಪ್ಪಗೌಡ, ಉಪ ವಲಯ ಅರಣ್ಯ ಅಧಿಕಾರಿ ರಾಯನಗೌಡ, ಅರಣ್ಯ ಗಸ್ತುಪಾಲಕರಾದ ಸೈಯ್ಯದ್​ ಪಟೇಲ್​, ಸಿದ್ದಲಿಂಗಯ್ಯ, ರಾಜಪ್ಪ , ಶರಣು, ಮಲ್ಲಪ್ಪ, ಲಾಲ್​ ಅಹ್ಮದ್​, ರಾಜು ಸೇರಿ ಅನೇಕ ಅರಣ್ಯ ಇಲಾಖೆ ಅಧಿಕಾರಿಗಳು ಗೆದ್ದಲಮರಿ, ಏದಲಭಾವಿ ತಾಂಡಾ, ಹಿರೇಹಳ್ಳದ ಮರ್ಚಿಗೆ ಭೇಟಿ ನೀಡಿ ಆಯಕಟ್ಟಿನ ಸ್ಥಳಗಳಲ್ಲಿ ಚಿರತೆ ಸೆರೆಗಾಗಿ ಬೋನು ಅಳವಡಿಸಿ ಕ್ರಮಕ್ಕೆ ಮುಂದಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಕಕ್ಕೇರಾ ಸಮೀಪದ ಜಂಪಾರದೊಡ್ಡಿ ಮತ್ತು ಪೂಲಭಾವಿ ದೊಡ್ಡಿಯಲ್ಲಿ ಕರಡಿಯೊಂದು ಇಬ್ಬರ ಯುವಕರ ಮಾರಣಾಂತಿಕ ದಾಳಿ ಮಾಡಿ ಪರಾರಿಯಾಗಿತ್ತು. ಅವಾಗ್ಗೂ ಕರಡಿ ಹಿಡಿಯಲು ಬೋನು ಅಳವಡಿಸಿದ್ದರೂ ಕರಡಿ ಎತ್ತ ಹೋಯಿತು ಎಂದು ಗೊತ್ತಾಗಲೇ ಇಲ್ಲ. ಕರಡಿ ದಾಳಿ ಮಾಸುವ ಮುನ್ನವೇ ಈಗ ಚಿರತೆ ಭಯ ಎಲ್ಲೆಡೆ ಜೋರಾಗಿದೆ. ಯಾವಾಗ ಜನ, ಜಾನುವಾರಗಳ, ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತೋ ಎಂಬ ಭೀತಿಯಲ್ಲಿ ಕಾಲ ಕಳೆಯುವಂತಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲೆಡೆ ಜಾಗೃತಿ ಮೂಡಿಸಿ ಚಿರತೆಯನ್ನು ಅರವಳಿಕೆ ಮದ್ದಿನಿಂದಾಗಲಿ ಅಥವಾ ಜೀವಂತವಾಗಿ ಸೆರೆ ಹಿಡಿಯಬೇಕು ಎಂದು ವಾಲ್ಮೀಕಿ ಮುಖಂಡ ಚನ್ನಪ್ಪ ಗೋವಿಂದರ್​ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net