ಬೆಂಗಳೂರು: ಓರ್ವ ರಾಜನಿಗೆ ರಾಜ್ಯದಲ್ಲಿ ಮಾತ್ರ ಬಳಗ ಇರುತ್ತದೆ. ಆದರೆ, ಒಬ್ಬ ಕವಿಗೆ ಇಡೀ ಜಗತ್ತಿನಲ್ಲೇ ಬಳಗ ಇರಲಿದೆ ಎಂದು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.
ಸಿನಿಮಾ ಗೀತರಚನೆಕಾರ ಡಾ. ವಿ.ನಾಗೇಂದ್ರ ಪ್ರಸಾದ್ ಜನ್ಮದಿನ ಪ್ರಯುಕ್ತ ವೀರಲೋಕ ಪ್ರಕಾಶನವು ಚಾಮರಾಜಪೇಟೆ ಕಲಾವಿದರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಕವಿರತ್ನ ಸಾರ್ಥಕ ಸುವರ್ಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕವಿರತ್ನ’ ಬಿರುದಿನಿಂದ ನಾಗೇಂದ್ರಪ್ರಸಾದ್‌ಗೆ ದೊಡ್ಡ ಜವಾಬ್ದಾರಿ ಬಂದಿದೆ. ಬೇರೆ ವಿಚಾರಧಾರೆಯವರನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದು ಒಬ್ಬ ಸಾಹಿತಿ, ಸಂಗೀತಗಾರನಿಗೆ ಸಾಧ್ಯ. ನಾಗೇಂದ್ರ ಪ್ರಸಾದ್ ಮುಂದಿನ ಪರಂಪರೆಯ ಉತ್ತರಾಧಿಕಾರಿಯಾಗಿದ್ದಾರೆ. ಅನುಭವಿ ಮತ್ತು ಪ್ರಭಾವಿ ಲೇಖಕರಲ್ಲಿ ಒಬ್ಬರಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ದೊಡ್ಡ ಭವಿಷ್ಯ ಇದೆ ಎಂದರು.
ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ಇವತ್ತಿನ ಕಾಲದಲ್ಲಿ ಅಸೂಯೆ ಜಾಸ್ತಿ ಇದೆ. ಆದರೆ, ಹಂಸಲೇ ಅವರು ನಾಗೇಂದ್ರ ಪ್ರಸಾದ್ ಅವರನ್ನು ‘ಉತ್ತರಾಧಿಕಾರಿ’ ಎಂದು ಕರೆದಿದ್ದಾರೆ. ಅದು ಅವರ ದೊಡ್ಡ ಗುಣ. ಪುನೀತ್‌ರಾಜ್ ಕುಮಾರ್ ಕುರಿತು ಒಂದು ದಿನದಲ್ಲಿ ಹಾಡು ಬರೆದುಕೊಟ್ಟಿದ್ದರು. ಆ ಹಾಡು ಹೆಚ್ಚು ಜನಪ್ರಿಯವಾಯಿತು. ಅದು ನಾಗೇಂದ್ರ ಪ್ರಸಾದ್‌ರ ದೊಡ್ಡ ಗುಣ. ಚಿತ್ರರಂಗಕ್ಕೆ ಸರಸ್ವತಿ ಪುತ್ರರು ಇದ್ದಂತೆ. ಅವರು ರಚಿಸಿದ ಗೀತೆಗಳು ಚಿತ್ರರಂಗಕ್ಕೆ ಶಕ್ತಿ ತುಂಬಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎನ್.ಎಂ. ಸುರೇಶ್, ನಟರಾದ ಶರಣ್, ಪ್ರೇಮ್, ನಟಿ ಪ್ರೇಮಾ, ನಟ ಗುರುದತ್ತ, ಲಹರಿ ಆಡಿಯೋದ ವೇಲು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪ್ರಕಾಶಕ ವೀರಕಪುತ್ರ ಶ್ರೀನಿವಾಸ್ ಇತರರಿದ್ದರು.