ವಾರಪೂರ್ತಿ ಕರಾವಳಿಗೆ ರೆಡ್ ಅಲರ್ಟ್ ಘೋಷಣೆ: ಮಲೆನಾಡು, ಉ.ಕರ್ನಾಟಕದ ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್- Red Alert announced

 ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆ
ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆ
Published on
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದೆ. ಕರಾವಳಿ ಮತ್ತು ಮಲೆನಾಡಿನ ವ್ಯಾಪ್ತಿಯ ಪ್ರದೇಶಗಳಲ್ಲಿ ಬುಧವಾರವೂ ವರುಣಾರ್ಭಟ ಮುಂದುವರಿದಿದೆ.
ದಕ್ಷಿಣ ಕನ್ನಡದ ಮುಲ್ಕಿ 262, ಉತ್ತರ ಕನ್ನಡದ ಮಂಕಿ 205, ಮಂಗಳೂರು ವಿಮಾನ ನಿಲ್ದಾಣ 135 ಮತ್ತು ಮಂಗಳೂರು 132 ಮಿಮೀ ವರ್ಷಧಾರೆಯಾಗಿತ್ತು.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜು.2ರಿಂದ ಜು.8ವರೆಗೆ ಜೋರಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ವೇಳೆ 204 ಮಿಮೀವರೆಗೆ ಮಳೆ ಬೀಳಬಹುದು. ಪ್ರತಿ ಗಂಟೆಗೆ 60 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಸಮುದ್ರ ತೀರದ ಪ್ರದೇಶಗಳಿಗೆ ಮೀನುಗಾರರು ಮತ್ತು ಸಾರ್ವಜನಿಕರು ತೆರಳದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ವಾರಪೂರ್ತಿ ಬಿರುಸಾಗಿ ಮಳೆಯಾಗುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು ಮತ್ತು ತುಮಕೂರು ಸೇರಿ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಈ ವೇಳೆ ಸಾಧಾರಣ ಮಳೆ ಸುರಿಯುಲಿದೆ.
ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ದುರ್ಬಲಗೊಂಡಿದ್ದ ಮುಂಗಾರು ಈಗ ಚುರುಕು ಪಡೆದಿದೆ. ಇದರ ಪರಿಣಾಮ ಪಶ್ಚಿಮಘಟ್ಟ ಪ್ರದೇಶಗಳಲ್ಲಿ 3-4 ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ತೇವಾಂಶ ಭರಿತ ಮೋಡಗಳಿರುವುದು ಸೇರಿ ಇತರ ಕಾರಣಗಳಿಂದ ಮುಂದಿನ ಒಂದು ವಾರವರೆಗೆ ಆ ಭಾಗಗಳಲ್ಲಿ ಜೋರು ಮಳೆ ಸುರಿಯಲಿದೆ. ಕರಾವಳಿಯ ಕೆಲ ಪ್ರದೇಶಗಳಲ್ಲಿ 260 ಮಿಮೀ ವರೆಗೆ ಮಳೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಜಲಾಶಯಗಳಿಗೆ ಮತ್ತು ಬಿತ್ತನೆಗೆ ಜುಲೈ ತಿಂಗಳು ನಿರ್ಣಾಯಕ. ಆದರೆ, ಜೂನ್‌ನಂತೆ ಜುಲೈನಲ್ಲಿಯೂ ಮಳೆ ಕುಂಠಿತವಾಗಲಿದೆ. ಭಾರತೀಯ ಹವಾಮಾನ ಇಲಾಖೆ(ಐಎಂಡಿ), ದೇಶಾದ್ಯಂತ ಜುಲೈ ತಿಂಗಳಿನ ಮಳೆ ಬೀಳುವ ವರದಿ ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಕರ್ನಾಟಕದಲ್ಲಿ ಜುಲೈ ಮೊದಲ ವಾರ ಉತ್ತಮ ಸುರಿಯಲಿದೆ. 2ನೇ ವಾರದಲ್ಲಿ ರಾಜ್ಯದ ಕೆಲವೆಡೆ ಅಲ್ಲೆಲ್ಲಿ ಮಳೆಯಾಗಲಿದೆ. 3 ಮತ್ತು 4ನೇ ವಾರದಲ್ಲಿ ಸಂಪೂರ್ಣ ಕೊರತೆಯಾಗಲಿದೆ.
- ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net