ಮತ್ತೆ ನಿರಾಸೆ ತಂದ ಏತ ನೀರಾವರಿ ಯೋಜನೆ

ಕಳೆದ ವರ್ಷವೇ ಬೂದಿಹಾಳ-ಪೀರಾಪುರ ಏತ ನೀರಾವರಿ ಪೈಪ್​ಲೈನ್​ ಕಾಮಗಾರಿ ಪೂರ್ಣಗೊಂಡಿರುವುದು.
ಕಳೆದ ವರ್ಷವೇ ಬೂದಿಹಾಳ-ಪೀರಾಪುರ ಏತ ನೀರಾವರಿ ಪೈಪ್​ಲೈನ್​ ಕಾಮಗಾರಿ ಪೂರ್ಣಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಇನ್ನೂ ಪೂರ್ಣಗೊಳ್ಳದ ಬೂದಿಹಾಳ&ಪೀರಾಪುರ ಕಾಮಗಾರಿ
  • ರೈತರ ಹೊಲಗಳಿಗೆ ಯಾವಾಗ ನೀರು ?
ಕೆಂಭಾವಿ: ಕೃಷ್ಣಾ ನದಿಯ ಹಿನ್ನೀರನ್ನು ಬಳಸಿಕೊಂಡು ಯಾದಗಿರಿ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ನೀರುಣಿಸುವ ಸರ್ಕಾರದ ಪ್ರಮುಖ ನೀರಾವರಿ ಯೋಜನೆಯಾದ ಬೂದಿಹಾಳ&ಪೀರಾಪುರ ಏತ ನೀರಾವರಿ ಯೋಜನೆ ಕಾಮಗಾರಿ ಇನ್ನೂ ಮಂದಗತಿಯಲ್ಲಿಯೇ ಸಾಗಿದ್ದು, ಕಳೆದ ಐದು ವರ್ಷದಿಂದ ಜಮೀನುಗಳಿಗೆ ನೀರು ಬರುತ್ತದೆ ಎಂದು ಕಾಯುತ್ತ ಕುಳಿತಿರುವ ರೈತರಿಗೆ ಈ ವರ್ಷವೂ ನಿರಾಸೆ ಮಾಡಿದೆ.
ಈ ಯೋಜನೆಯಿಂದ ಯಾದಗಿರಿ ಜಿಲ್ಲೆಯ ಒಟ್ಟು 31 ಗ್ರಾಮಗಳ ಸುಮಾರು 50 ಸಾವಿರ ಎಕರೆಗೂ ಅಧಿಕ ಕೃಷಿ ಭೂಮಿ ನೀರಾವರಿ ಸೌಲಭ್ಯ ಪಡೆಯಲಿದೆ. ಆದರೆ ಮೊದಲ ಹಂತದಲ್ಲಿ ನೀರಾವರಿ ಸೌಲಭ್ಯ ವಂಚಿತವಾದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಹಾಪುರ ಮತೇತ್ರದಲ್ಲಿ ಸುಮಾರು 17805 ಹೆಕ್ಟೇರ್​ ಪ್ರದೇಶಕ್ಕೆ ನೀರು ಒದಗಿಸುವುದು ಉದ್ದೇಶದಿಂದ 2020ರಲ್ಲಿ ಸರ್ಕಾರ ಏತ ನೀರಾವರಿ ಯೋಜನೆಗೆ 620.33 ಕೋಟಿ ರೂ. ಬಿಡುಗಡೆ ಮಾಡಿ ಟೆಂಡರ್​ ಕರೆದಿತ್ತು.
ಕಳೆದ ಐದು ವರ್ಷದಿಂದ ಈ ಕಾಮಗಾರಿ ನಡೆಯುತ್ತಿದ್ದು, ಶೇ.90 ಕಾಮಗಾರಿ ಪೂರ್ಣಗೊಂಡಿದೆ.  ಪಂಪ್​ಹೌಸ್​, ರೈತರ ಜಮೀನುಗಳಲ್ಲಿ ವಿತರಣಾ ಕಾಲುವೆಗಳ ನಿರ್ಮಾಣ ಮಾತ್ರ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೂ ಕಾಮಗಾರಿ ಪೂರ್ಣಗೊಳ್ಳದಿರುವುದು ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
2017ರಲ್ಲಿ ರೈತ ಹೋರಾಟ ಸಮಿತಿ ಬೃಹತ್​ ಪ್ರತಿಭಟನೆ ನಡೆಸಿದಾಗ ಶಾಸಕ ಶರಣಬಸಪ್ಪ ದರ್ಶನಾಪುರ ಹಾಗೂ ಅಂದು ಸಚಿವರಾಗಿದ್ದ ನರಸಿಂಹ ನಾಯಕ (ರಾಜುಗೌಡ) ಅವರು ರೈತರ ಹೋರಾಟಕ್ಕೆ ಸ್ಪಂದಿಸಿ ಅಂದಿನ ಸರ್ಕಾರಕ್ಕೆ ಮನವರಿಕೆ ಮಾಡಿ 2019ರಲ್ಲಿ ಈ ಯೋಜನೆ ಜಾರಿಗೆ ತರಲು ಶತ ಪ್ರಯತ್ನ ಮಾಡಿದ್ದರು. ಇದೀಗ ಅವರದ್ದೇ ಸರ್ಕಾರವಿದ್ದು, ಶಾಸಕ ದರ್ಶನಾಪುರ ಅವರು ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು ಎನ್ನುವುದು ಈ ಭಾಗದ ರೈತ ಹೋರಾಟಗಾರರ ಮತ್ತು ರೈತರ ಒತ್ತಾಯವಾಗಿದೆ.
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಬೊಗಸೆಯಲ್ಲಿ ನೀರಿದ್ದರೂ ಕಳೆದ ನಾಲ್ಕು ದಶಕಗಳಿಂದ ನೀರಾವರಿಯಿಂದ ವಂಚಿತರಾಗಿದ್ದ ಪ್ರದೇಶದ ರೈತರು ತಮ್ಮ ಜಮೀನುಗಳಿಗೆ ನೀರು ಯಾವಾಗ ಹರಿಯುತ್ತವೆ ಎಂದು ಕಳೆದ ನಾಲ್ಕು ವರ್ಷಗಳಿಂದ ಬಕಪಕ್ಷಿಯಂತೆ ಕಾಯುತ್ತಿದ್ದಾರೆ. ಪ್ರತಿವರ್ಷ ಮಳೆಯ ಅಭಾವ ಎದುರಿಸುತ್ತಿರುವ ಈ ಭಾಗದ ಸಾವಿರಾರು ರೈತರಿಗೆ ನೀರಾವರಿ ಸೌಲಭ್ಯವಾದರೆ ಆರ್ಥಿಕವಾಗಿ ಸದೃಢರಾಗುತ್ತಾರೆ ಎಂಬ ಆಸೆ ಇನ್ನೂ ಕನಸಾಗಿಯೇ ಉಳಿದಿದೆ.
ಈ ಬೃಹತ್​ ನೀರಾವರಿ ಯೋಜನೆ 2016ರಲ್ಲಿ ಆರಂಭವಾದರೂ ವಿವಿಧ ಹಂತಗಳಲ್ಲಿ ಎದುರಾದ ನೀರು ಹಂಚಿಕೆ ವಿವಾದ, ತಾಂತ್ರಿಕ ತೊಡಕು ಮತ್ತು ಅನುದಾನದ ಕೊರತೆಯಿಂದಾಗಿ ಕಾಮಗಾರಿ ನಿರೀತ ವೇಗದಲ್ಲಿ ಪೂರ್ಣಗೊಂಡಿಲ್ಲ. ಇದೀಗ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಈ ಬಾರಿ ನೀರು ಹರಿದರೆ ರೈತರಿಗೆ ವರದಾನವಾಗುವುದಂತ ನಿಜ.
"

ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಈಗಾಗಲೇ ಶೇ.25 ಜಮೀನುಗಳಿಗೆ ನೀರು ಹರಿಸಲಾಗುತ್ತಿದೆ. ತಾಂತ್ರಿಕ ತೊಂದರೆ ಬಗೆಹರಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು.

— > ಶರಣಬಸಪ್ಪ ದರ್ಶನಾಪುರ ಶಾಸಕ
"

ಈ ನೀರಾವರಿ ಯೋಜನೆ ರೈತರಿಗೆ ಸಹಾಯವಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಜಮೀನುಗಳಿಗೆ ಕೇವಲ ಪೈಪ್​ಲೈನ್​ ಕಾಮಗಾರಿ ಮಾಡಿದ್ದು ಮುಖ್ಯ ಪೈಪ್​ ಮೂಲಕ ಜಮೀನುಗಳಿಗೆ ನೀರು ಹರಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

— > ಕೃಷ್ಣಾಜಿ ಕುಲಕರ್ಣಿ ಬೊಮ್ಮನಹಳ್ಳಿ ರೈತ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net