ಸಸ್ಯಕಾಶಿಯಲ್ಲಿ ಮೈದಳೆಯಲಿದೆ ಗಂಗರ ಸಾಮ್ರಾಜ್ಯ

Ganga Dynasty
Ganga Dynasty
Published on

ಪ್ರಮುಖ ಮುಖ್ಯಾಂಶಗಳು

  • * ಸ್ವಾತಂತ್ರ್ಯೋತ್ಸವ ಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ಶುರು
  • * ಕರ್ನಾಟಕದ ಮೊದಲ ರಾಜವಂಶದ ಗಾಥೆ ಅನಾವರಣ
ಬೆಂಗಳೂರು: ಸ್ವಾತಂತ್ರೋತ್ಸವ ಅಂಗವಾಗಿ ‘ಸಸ್ಯಕಾಶಿ’ ಲಾಲ್‌ಬಾಗ್‌ನಲ್ಲಿ ಆಗಸ್ಟ್‌ನಲ್ಲಿ ಆಯೋಜಿಸಲಾಗುವ 220ನೇ ಫಲಪುಷ್ಪ ಪ್ರದರ್ಶನದಲ್ಲಿ ಕರ್ನಾಟಕದ ಮೊದಲ ರಾಜವಂಶ ಮತ್ತು ದೀಘ ಕಾಲ ಆಡಳಿತ ನಡೆಸಿದ ಗಂಗರ ಸಾಮ್ರಾಜ್ಯದ ಮಾಹಿತಿ ಹಾಗೂ ಪ್ರತಿಕೃತಿಗಳು ಅನಾವರಣಗೊಳ್ಳಲಿದ್ದು, ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.
ಲಾಲ್‌ಬಾಗ್ ಸಸ್ಯತೋಟದ ಗಾಜಿನ ಮನೆಯಲ್ಲಿ ಗಂಗರ ಕಾಲದ ವಾಸ್ತುಶಿಲ್ಪದ ಜತೆಗೆ ಆ ಕಾಲದಲ್ಲಿನ ಶಿಕ್ಷಣ, ನೀರಾವರಿ, ಗಜಶಾಸದ ಕುರಿತ ವಿಶೇಷತೆ, ಗಂಗರ ಕಾಲದ ಪ್ರಮುಖ ದೊರೆಗಳು, ರಾಜಧಾನಿಗಳು, ತಲಕಾಡಿನ ವಿಶೇಷ ದೇಗುಲಗಳು, ಚಿತ್ರಕಲೆ ಹೀಗೆ ಹಲವು ಹೂವಿನ ಮಾದರಿಗಳನ್ನು ಜನಮನ ಸೆಳೆಯಲಿವೆ.

ಅಪ್ಪಟ ಕನ್ನಡಿಗರು:

ಕರ್ನಾಟಕದ ದಕ್ಷಿಣ ಭಾಗದಲ್ಲಿ, ಕಾವೇರಿಯ ಪರಿಸರದಲ್ಲಿ ರಾಜ್ಯ ಸ್ಥಾಪಿಸಿ ದೀರ್ಘಕಾಲ ಅಸ್ತಿತ್ವವನ್ನು ಉಳಿಸಿಕೊಂಡು ರಾಜ್ಯಭಾರ ಮಾಡಿದ್ದ ತಲಕಾಡಿನ ಗಂಗರು ಅಪ್ಪಟ ಕನ್ನಡಿಗರು. ಕರ್ನಾಟಕದ ಅಭಿವೃದ್ಧಿಗೆ, ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಭದ್ರ ಬುನಾದಿ ಹಾಕಿದವರಲ್ಲಿ ಪ್ರಮುಖರು. ಕ್ರಿ.ಶ. 325ರಿಂದ 999ರವರೆಗೆ ಅಂದರೆ ಸುಮಾರು 675 ವರ್ಷಗಳ ಕಾಲ ಗಂಗರು ಅಸ್ತಿತ್ವದಲ್ಲಿದ್ದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದ ಅರಸರು, ತಮ್ಮ ಆಡಳಿತ ಕಾಲದಲ್ಲಿ ತಲಕಾಡು, ಮಾನ್ಯಪುರ (ಮಣ್ಣೆ) ಕೋಲಾರ, ಶ್ರವಣಬೆಳಗೊಳ ಮೊದಲಾದ ಕಡೆ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿದ್ದರು. ಕಲೆ, ಸಾಹಿತ್ಯಕ್ಕೆ ನೆಲೆ
ಸಾಹಿತ್ಯ, ಶಿಲ್ಪಕಲೆ, ವಸ್ತುಶಿಲ್ಪಕ್ಕೆ ಗಂಗರ ಕಾಲದಲ್ಲಿ ವಿಶೇಷ ನೆಲೆ ಕಲ್ಪಿಸಲಾಗಿತ್ತು. ಇವರ ಅವಧಿಯಲ್ಲಿ ಕೆತ್ತಲಾದ ಶ್ರವಣಬೆಳಗೊಳದ ಬಾಹುಬಲಿ ಮತ್ತಿತರ ಮೂರ್ತಿಗಳೇ ಇದಕ್ಕೆ ನಿದರ್ಶನ. ನೀರಾವರಿಗೆ ವಿಶೇಷ ಪ್ರಾಧ್ಯಾನ್ಯತೆ ನೀಡುವ ಮೂಲಕ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಕಾವೇರಿ ನದಿಗೆ ಹಲವಾರು ಕಡೆ ಅಣೆಕಟ್ಟೆಗಳನ್ನು ಕಟ್ಟಿಸಿ, ನಾಲೆಗಳ ಮೂಲಕ ನೀರು ಹರಿಸಲಾಗುತ್ತಿತ್ತು. ಗಂಗರ ಆಡಳಿತಾವಧಿಯಲ್ಲಿ ಸಾವಿರಾರು ಕೆರೆ-ಕಟ್ಟೆಗಳು ನಿರ್ಮಾಣಗೊಂಡಿವೆ.


ಇಲಾಖೆಯಿಂದ ಹೊಸ ಪರಂಪರೆ

ಲಾಲ್‌ಬಾಗ್‌ನಲ್ಲಿ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತದೆ. ಇದರ ಮೂಲಕ ಮಹಾತ್ಮರು, ಮಹಾಪುರುಷರು, ಸ್ವಾತಂತ್ರ್ಯ ಹೋರಾಟಗಾರರು, ಐತಿಹಾಸಿಕ ಸ್ಥಳಗಳು ಸೇರಿ ವಿಶೇಷ ವಿಷಯಗಳನ್ನು ಆಧರಿಸಿ ಫಲಪುಷ್ಪಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಕೆಲಸ ಮಾಡುತ್ತಿದೆ. ಅಂತೆಯೇ ಈ ಬಾರಿ ಕನ್ನಡ ನಾಡನ್ನು ಆಳಿದ ಗಂಗ ವಂಶಸ್ಥರ ಕೊಡುಗೆಗಳನ್ನು ಪರಿಚಯಿಸಲಾಗುತ್ತಿದೆ. ಕದಂಬರು, ಚೋಳರು, ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರು ಹೀಗೆ ಕರ್ನಾಟಕವನ್ನು ಆಡಳಿದ ರಾಜಮನೆಗಳ ಬಹುದೊಡ್ಡ ಪರಂಪರೆಯೇ ಇದೆ. ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಲಪುಷ್ಪ ಪ್ರದರ್ಶನ ಉತ್ತಮ ವೇದಿಕೆಯಾಗಬಲ್ಲದು ಎಂಬುದು ತಜ್ಞರ ಅಭಿಪ್ರಾಯ.

ಕನ್ನಡ ನಾಡನ್ನು ದೀರ್ಘ ಕಾಲ ಆಳಿದವರಲ್ಲಿ ಮೊದಲಿಗರಾದ ಗಂಗರ ಕುರಿತು ಹಾಗೂ ಅವರು ಕನ್ನಡ ಭಾಷೆ, ಶಿಕ್ಷಣ, ನೀರಾವರಿ, ಧರ್ಮ, ಸಾಹಿತ್ಯ ವಾಸ್ತು ಮತ್ತು ಮೂರ್ತಿಶಿಲ್ಪ ಸೇರಿ ನಾಡು, ನುಡಿ, ಸಂಸ್ಕೃತಿಗೆ ನೀಡಿದ ಕೊಡುಗೆಗಳನ್ನು ಕನ್ನಡಿಗರಿಗೆ ಪರಿಚಯಿಸಲು ಅವರ ಕೊಡುಗೆಗಳನ್ನು ಫಲಪುಷ್ಪ ಪ್ರದರ್ಶನದ ಮೂಲಕ ಪರಿಚಯಿಸಲಾಗುವುದು.

— -ಡಾ. ಎಂ. ಜಗದೀಶ್, ರಾಜ್ಯ ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net