ಮಾಗಡಿ :ಆಧುನಿಕತೆ ನಡುವೆ ಶುದ್ಧೀಕರಿಸಿದ ನೀರೇ ಬೇಕೆನ್ನುವ ಈ ಕಾಲದಲ್ಲೂ ಯಾವುದೇ ತಂತ್ರಜ್ಞಾನದ ಹಂಗಿಲ್ಲದೆ ನಿಸರ್ಗದತ್ತವಾಗಿ ಪರಿಶುದ್ಧ ಕುಡಿಯುವ ನೀರನ್ನು ನಿರಂತರವಾಗಿ ನೀಡುತ್ತಿರುವ ಬಾವಿಯೊಂದು ತಾಲೂಕಿನಲ್ಲಿ ಗಮನ ಸೆಳೆಯುತ್ತಿದೆ.
ಹೌದು.. ತಾಲೂಕಿನ ಐತಿಹಾಸಿಕ ಸಾವನದುರ್ಗದ ತಪ್ಪಲಿನಲ್ಲಿರುವ ಕಲ್ಯಾಣ ಒಡೆಯರ ಮಠ (ಕೆ.ವಿ.ಮಠ) ಗ್ರಾಮದಲ್ಲಿರುವ ‘ಸಿಹಿನೀರಿನ ಬಾವಿ’ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ತಲೆ ತಲಾಂತರಗಳಿಂದ ಗ್ರಾಮಸ್ಥರ ಕುಡಿಯುವ ನೀರಿನ ಅಭಾವವನ್ನು ನೀಗಿಸುತ್ತಾ ಬಂದಿರುವ ಈ ಬಾವಿ ಎಂತಹ ಭೀಕರ ಬರಗಾಲ ಎದುರಾದರೂ ಬತ್ತದಿರುವುದು ಹೆಗ್ಗಳಿಕೆ.
ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣಗೊಂಡಿದೆ ಎನ್ನಲಾದ ಈ ಬಾವಿಯು, ಇಂದಿಗೂ ತನ್ನ ಮೂಲ ಸ್ವರೂಪವನ್ನು ಕಾಯ್ದುಕೊಂಡಿದೆ. ಬಾವಿಯ ನಿರ್ಮಾಣ ಸುಸಜ್ಜಿತವಾಗಿದ್ದರೂ, ಸೂಕ್ತ ರಕ್ಷಣೆ ಹಾಗೂ ನಿರ್ವಹಣೆಯಿಲ್ಲದೆ ಈಗ ಬಾವಿಯ ಸುತ್ತಲೂ ಎತ್ತರವಾದ ಗಿಡಗಂಟಿ, ಪೊದೆಗಳು ಬೆಳೆದುಕೊಂಡಿವೆ.
ಸರಿಯಾದ ರಕ್ಷಣಾ ಬೇಲಿ ಇಲ್ಲದಿರುವುದರಿಂದ ಐತಿಹಾಸಿಕ ಬಾವಿಯ ನೀರು ಕಲುಷಿತಗೊಳ್ಳುವ ಆತಂಕ ಎದುರಾಗಿದೆ. ಆದರೂ ಸ್ಥಳೀಯ ಹಂಚಿಕುಪ್ಪೆ ಗ್ರಾಮಪಂಚಾಯಿತಿ ಅಧಿಕಾರಿಗಳು ಕಣ್ಣೆತ್ತಿಯೂ ನೋಡದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಿತ್ಯ ಸಾಲು ಸಾಲು ನಿಂತು ಈ ಬಾವಿಯಿಂದ ನೀರು ಸಂಗ್ರಹಿಸುವುದು ಇಲ್ಲಿನ ದೈನಂದಿನ ದೃಶ್ಯ. ಗ್ರಾಮದ ಪ್ರತಿ ಮನೆಯಲ್ಲೂ ಮೊದಲು ಈ ಸಿಹಿನೀರಿನ ಬಾವಿಯ ನೀರನ್ನು ತಂದು ಇಟ್ಟುಕೊಂಡೇ ಉಳಿದ ಕೆಲಸಗಳಿಗೆ ಚಾಲನೆ ನೀಡಲಾಗುತ್ತದೆ. ಆಧುನಿಕ ಆರ್‌ಒ ಪ್ಲಾಂಟ್‌ಗಳ ನೀರಿಗಿಂತಲೂ ಹೆಚ್ಚಿನ ಪೋಷಕಾಂಶ ಮತ್ತು ಶುದ್ಧತೆ ಹೊಂದಿರುವ ಈ ನೀರು, ಗ್ರಾಮಸ್ಥರ ಆರೋಗ್ಯಯುತ ಜೀವನಕ್ಕೆ ವರದಾನವಾಗಿದೆ. ಹಲವು ವರ್ಷಗಳ ಹಿಂದೆ ತಾಲೂಕಿನಲ್ಲಿ ಭೀಕರ ಬರಗಾಲ ಆವರಿಸಿದಾಗ ಸುತ್ತಮುತ್ತಲಿನ ಎಲ್ಲ ನೀರಾವರಿ ಮೂಲಗಳು ಬತ್ತಿಹೋಗಿದ್ದವು. ಆದರೆ, ಈ ಸಿಹಿನೀರಿನ ಬಾವಿ ಮಾತ್ರ ತನ್ನ ಒಡಲಲ್ಲಿ ನಿರಂತರವಾಗಿ ಸಿಹಿ ಜಲವನ್ನು ಒದಗಿಸುವ ಮೂಲಕ ಸುತ್ತಮುತ್ತಲಿನ ಹಳ್ಳಿಗಳಿಗೆ ಜೀವದಾಯಿಯಾಗಿ ಕಾರ್ಯನಿರ್ವಹಿಸಿತ್ತು.
ಒಂದು ಕಾಲದಲ್ಲಿ ಹಳ್ಳಿ-ನಗರ ಎನ್ನದೆ ಬಾವಿಗಳೇ ಕುಡಿಯುವ ನೀರಿನ ಪ್ರಮುಖ ಆಧಾರವಾಗಿದ್ದವು. ಆದರೆ, 15-20 ವರ್ಷಗಳಿಂದೀಚೆಗೆ ಕೊಳವೆಬಾವಿ ಹಾಗೂ ಟ್ಯಾಕ್ ನೀರಿಗೆ ಮೊರೆಹೋದ ಬಳಿಕ, ಅನೇಕ ಬಾವಿಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಕೆ.ವಿ.ಮಠದಂತಹ ಐತಿಹಾಸಿಕ ಸಿಹಿನೀರಿನ ಬಾವಿಗಳನ್ನು ಆಡಳಿತ ಯಂತ್ರವು ತಕ್ಷಣ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ನಮ್ಮ ಪೂರ್ವಜರ ಕಾಲದಿಂದಲೂ ಈ ಬಾವಿ ನಮ್ಮ ಜೀವಜಲವಾಗಿದೆ. ಈಗ ಸುತ್ತಲೂ ಗಿಡಗಂಟಿಗಳು ಬೆಳೆದು ರಕ್ಷಣೆ ಇಲ್ಲದಂತಾಗಿದೆ. ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನಹರಿಸಿ ಬಾವಿಯನ್ನು ಸ್ವಚ್ಛಗೊಳಿಸಿ, ಅಭಿವೃದ್ಧಿಪಡಿಸಬೇಕು.
ಪಾಲನೇತ್ರ, ಗ್ರಾಮಸ್ಥರು, ಕೆ.ವಿ.ಮಠ
ಸ್ಥಳೀಯರ ಆಗ್ರಹ
* ಬಾವಿಯ ಸುತ್ತಲೂ ಬೆಳೆದಿರುವ ಗಿಡಗಂಟಿಗಳನ್ನು ತಕ್ಷಣ ತೆರವುಗೊಳಿಸಿ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಬೇಕು.
* ಬಾವಿಗೆ ನರೇಗಾ ಅಥವಾ ಪಂಚಾಯಿತಿಯ ಇತರೆ ಅನುದಾನ ಬಳಸಿ ಕಬ್ಬಿಣದ ಪರದೆ ಹಾಗೂ ಸುಸಜ್ಜಿತ ರಕ್ಷಣಾ ಬೇಲಿ ನಿರ್ಮಿಸಬೇಕು.
* ಕೆಂಪೇಗೌಡರ ಕಾಲದ ಜಲಮೂಲವು ಕಣ್ಮರೆಯಾಗದಂತೆ ಇತಿಹಾಸದ ಕುರುಹಾಗಿ ಸಂರಕ್ಷಿಸಬೇಕು.
* ಗತವೈಭವ ಕಳೆದುಕೊಳ್ಳುತ್ತಿರುವ ಬಾವಿಗಳು!