ಯಾದಗಿರಿ: ಕರ್ತವ್ಯಲೋಪ ಆರೋಪದ ಮೇರೆಗೆ ಸೇವೆಯಿಂದ ವಜಾಗೊಂಡಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ)ದ ಚಾಲಕ ಕಂ ನಿರ್ವಾಹಕನೊಬ್ಬ ಬಸ್ಸನ್ನೇ ಕದ್ದೊಯ್ದಿರುವುದು ಸೈದಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಯುಗಾದಿ ಹಬ್ಬದ ದಿನವಾದ ಗುರುವಾರ ಈ ಅಪರೂಪದ ವಿದ್ಯಮಾನ ನಡೆದಿದೆ. ಸೇವೆಯಿಂದ ವಜಾಗೊಂಡಿದ್ದ ಚಾಲಕ ಕಂ ನಿರ್ವಾಹಕ ಮಹಿಪಾಲರೆಡ್ಡಿ ಎಂಬಾತನೇ ಸೈದಾಪುರ ನಿಲ್ದಾಣದಿಂದ ಬಸ್ ಕೊಂಡೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಹಿಂದೆಯೂ ಒಂದೆರಡು ಸಲ ಅಮಾನತುಗೊಂಡಿದ್ದ ಮಹಿಪಾಲರೆಡ್ಡಿ ತನ್ನ ಊರು ರಾಚನಳ್ಳಿಗೆ ಹೋಗಲು ಯಾವುದೇ ವಾಹನ ಸೌಕರ್ಯ ಇಲ್ಲದ್ದರಿಂದ ಸೈದಾಪುರ ನಿಲ್ದಾಣದಲ್ಲಿ ನಿಂತಿದ್ದ ಬಸ್ಸನ್ನೇ ಕೊಂಡೊಯ್ದಿದ್ದು, ಗ್ರಾಮದ ದೇವಸ್ಥಾನ ಎದುರು ನಿಲ್ಲಿಸಿದ್ದಾನೆ. ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಸೈದಾಪುರ ಠಾಣೆಯಲ್ಲಿ ವಿರುದ್ಧ ಕೇಸ್ ದಾಖಲಾಗಿದ್ದು, ಕಳವಾಗಿದ್ದ ಬಸ್ಸನ್ನು ಪೊಲೀಸರು ತಂದಿದ್ದಾರೆ.