ಯಾದಗಿರಿ: ರಾಜ್ಯ ಸರ್ಕಾರದ ಮೂರು ವರ್ಷಗಳ ಆಡಳಿತ ಸಾಧನೆ ಶೂನ್ಯ. ಈವರೆಗೆ ಮುನ್ನೂರು ವೈಫಲ್ಯಗಳ ಹಗರಣ ಮಾಡಿ ಅದನ್ನೇ ಸಾಧನೆ ಎಂದು ಹೇಳಿಕೊಂಡು ಈಗ ಸಮಾವೇಶ ಮಾಡುವ ಮೂಲಕ ಸುಳ್ಳನ್ನೇ ಸತ್ಯವಾಗಿ ತೋರಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಬಿಜೆಪಿ ಜಿಲ್ಲಾದ್ಯ ಬಸವರಾಜಪ್ಪ ವಿಭೂತಿಹಳ್ಳಿ ಆರೋಪಿಸಿದರು.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತರ ಪರಿಸ್ಥಿತಿ ಹದಗೆಟ್ಟಿದ್ದು, ರೈತರಿಗೆ ಸಮರ್ಪಕ ನೆರವು ಸಿಗುತ್ತಿಲ್ಲ, ಹಾಲು ಉತ್ಪಾದಕರಿಗೆ ನೀಡಬೇಕಾದ ಪೋತ್ಸಾಹಧನ ಬಾಕಿಯಾಗಿದೆ. ಬೀಜ ಮತ್ತು ಕೃಷಿ ವೆಚ್ಚಗಳು ಏರಿಕೆಯಾಗಿವೆ. ರೈತರ ಸಾವಿನ ಅಂಕಿ ಅಂಶಗಳನ್ನು ಉಲ್ಲೆಖಿಸಿದ ಅವರು, ಇದು ಮಾನಗೆಟ್ಟ ಸರ್ಕಾರ. ರೈತರ ನೋವಿಗೆ ಸ್ಪಂದಿಸುವ ಬದಲು ಸರ್ಕಾರ ರಾಜಕೀಯ ಸಮಾವೇಶಗಳಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ರಸಗೊಬ್ಬರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕೇಂದ್ರದ ಕಿಸಾನ್ ಸನ್ಮಾನ್ ಯೋಜನೆ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ನೀರು, ವಿದ್ಯುತ್, ಭೂ ನೋಂದಣಿ ಸೇರಿ ಎಲ್ಲ ಸೇವೆಗಳ ದರ ಏರಿಕೆಯಾಗಿದೆ ಎಂದು ದೂರಿದರು.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಮರಳು ಮಾಡುವ ಕೆಲಸ ನಡೆಯುತ್ತಿದೆ. ಜನರಿಗೆ ಶಾಶ್ವತ ಅಭಿವೃದ್ಧಿ ನೀಡುವ ಬದಲು ಮೋಸದ ರಾಜಕಾರಣ ಮಾಡಲಾಗುತ್ತಿದೆ. ಕೆಎಸ್ಆರ್ಟಿಸಿ ನೌಕರರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಾರಿಗೆ ನೌಕರರ ಮುಷ್ಕರ ತಡೆಯಲು ಸರ್ಕಾರಕ್ಕೆ ಆಗುತ್ತಿಲ್ಲ. ವೇತನ ಹೆಚ್ಚಳವೂ ಇಲ್ಲ. ಹಳೆಯ ಬಸ್ಗಳೇ ರಸ್ತೆಯಲ್ಲಿ ಓಡುತ್ತಿವೆ. ಪಂಚರ್ ಹಾಕಿಸಲು ಹಣವಿಲ್ಲದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿದೆ ಎಂದರು.
ಇಂತಹ ಸಂದರ್ಭದಲ್ಲಿ ಮೂರು ವರ್ಷದ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ ಎಂದು ಅವರು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕಿ ನಾಗರತ್ನಾ ಕುಪ್ಪಿ, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್, ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಮೇಲಪ್ಪ ಗುಳಗಿ, ಪರಶುರಾಮ ಕುರಕುಂದಿ, ತಿರುಪತಿರಡ್ಡಿ ಇತರರಿದ್ದರು.
ಜಾತಿ ಹೆಸರಲ್ಲಿ ಸಮಾಜ ಒಡೆಯುವ ಕೆಲಸ
ರಾಜ್ಯದಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಕೆಲಸ ನಡೆಯುತ್ತಿದೆ ಹಿಜಾಬ್ ವಿಚಾರವನ್ನು ಉಲ್ಲೆಖಿಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಇರುವಾಗಲೇ ಸರ್ಕಾರ ನಿಷೇಧ ಹಿಂಪಡೆಯಲು ಮುಂದಾಗಿರುವುದು ಯಾಕೆ ? ಇದು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಇದಾಗಿದೆ ಎಂದು ವಿಭೂತಿಹಳ್ಳಿ ಆರೋಪಿಸಿದರು.