ಯಾದಗಿರಿಯಲ್ಲಿ ಶುಕ್ರವಾರ ಹಮ್ಮಿಕೊಂಡ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ ಕಾರ್ಯಕ್ರಮದಲ್ಲಿ ಡಿಎಚ್ಒ ಡಾ.ಮಹೇಶ ಬಿರಾದಾರ ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ಎಂ.ಎಸ್.ಪಾಟೀಲ್,ಲಕ್ಷ್ಮೀಕಾಂತ ಮುಂಡಾಸ್, ಜಗನ್ನಾಥ ಇತರರಿದ್ದರು.
ಯಾದಗಿರಿ: ಜಗತ್ತಿನ ಸುಭದ್ರತೆ ಮತ್ತು ಶಾಂತಿಗೆ ಭಯೋತ್ಪಾದನೆ ದೊಡ್ಡ ಕಂಟಕವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದಾರ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶುಕ್ರವಾರ ಭಯೋತ್ಪಾದನಾ ವಿರೋಧಿ ದಿನ ಕುರಿತು ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ದೇಶದ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ದೊಡ್ಡ ಕಂಟಕವಾಗಿದೆ. ಇದರ ಅಪಾಯ ಮತ್ತು ಪರಿಣಾಮದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷವೂ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಭಯೋತ್ಪಾದಕರು ಸಾಮಾನ್ಯ ಜನರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸುತ್ತಾರೆ. ತಮ್ಮ ಪೂರ್ವಗ್ರಹ ಪೀಡಿತ ಮನಸ್ಥಿತಿಯ ಕಾರಣಗಳ ಸಾಕಾರಕ್ಕಾಗಿ ಹಿಂಸೆಯನ್ನೇ ಪ್ರಧಾನವನ್ನಾಗಿರಿಸಿಕೊಂಡು ರಾಷ್ಟ್ರದ ಸುಭದ್ರತೆಗೆ ಧಕ್ಕೆ ತರುವಂತಹ, ಅಶಾಂತಿ ಸೃಷ್ಟಿಸುವುದೇ ಗುರಿಯಾಗಿಸಿಕೊಂಡು ವಿವಿಧ ವಿಧ್ವಂಸಕ ಕೃತ್ಯಗಳಿಗೆ ಮುಂದಾಗುತ್ತಾರೆ ಎಂದರು.
ಇಂತಹ ಸವಾಲುಗಳಿಗೆ ಸನ್ನದ್ಧರಾಗಿದ್ದುಕೊಂಡು, ಮಾನವೀಯತೆ ಮತ್ತು ಶಾಂತಿಯ ಸಂದೇಶವನ್ನು ಪ್ರಚಾರ ಮಾಡುತ್ತಾ ಭಯೋತ್ಪಾದನೆ ಚಟುವಟಿಕೆಗಳ ವಿರುದ್ಧ ಹೋರಾಡುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಕೇಂದ್ರ ಸರ್ಕಾರವು ಪ್ರತಿ ವರ್ಷ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ದಿನ ಆಚರಿಸುವ ಕ್ರಮವನ್ನು ಕೈಗೊಂಡಿದೆ ಎಂದು ಹೇಳಿದರು.
ಜಿಲ್ಲಾ ಸರ್ವೇಣಾ ಅಧಿಕಾರಿಗಳಾದ ಡಾ.ಎಂ.ಎಸ್.ಪಾಟೀಲ್ ಮಾತನಾಡಿದರು. ಜಿಲ್ಲಾ ಆರೋಗ್ಯ ಶಿಣಾಧಿಕಾರಿ ಲಕ್ಷ್ಮೀಕಾಂತ ಮುಂಡಾಸ್, ಉಪ ಜಿಲ್ಲಾ ಆರೋಗ್ಯ ಶಿಣಾಧಿಕಾರಿ ಜಗನ್ನಾಥ, ತಾಲೂಕ ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ, ಸಹಾಯಕ ಆಡಳಿತಾಧಿಕಾರಿ ಗಿರೀಶ ಇತರರಿದ್ದರು.