ಕೆಂಭಾವಿ: ಕಲಬುರಗಿಯಲ್ಲಿ ಪಿಯು ಕಾಲೇಜು ಛಾವಣಿ ಪದರು ಕುಸಿದು ವಿದ್ಯಾರ್ಥಿನಿಯರು ಗಾಯಗೊಂಡ ಬಳಿಕ ಎಚ್ಚೆತ್ತ ಶಿಕ್ಷಣ ಇಲಾಖೆ ಹಳೆಯ ಶಾಲಾ&ಕಾಲಾಜು ಕಟ್ಟಡದ ಸ್ಥಿತಿಗತಿ ಕುರಿತು ಮಾಹಿತಿ ನೀಡುವಂತೆ ಆದೇಶಿಸಿದೆ. ಪಟ್ಟಣ ಸೇರಿ ವಲಯದ ಸರ್ಕಾರಿ ಶಾಲೆ ಕಟ್ಟಡಗಳ ಸ್ಥಿತಿಗತಿ ಕುರಿತು ವಿಜಯವಾಣಿ ಶನಿವಾರ ನಡೆಸಿದ ರಿಯಾಲಿಟಿ ಚೆಕ್ ವೇಳೆ ಹಲವು ಅಪಾಯಕಾರಿ ಚಿತ್ರಣ ಕಂಡುಬಂದಿದೆ.
ಪಟ್ಟಣದ ಹಿಲ್ಟಾಪ್ ಕಾಲನಿಯಲ್ಲಿ ಒಂದು ಹಾಗೂ ಮುರಕನಾಳ ಗ್ರಾಮದಲ್ಲೊಂದು ಸರ್ಕಾರಿ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಜೀವ ಭಯದಲ್ಲೇ ಮಕ್ಕಳಿಗೆ ಪಾಠ ಮಾಡುವ ಅನಿವಾರ್ಯತೆ ಶಿಕ್ಷಕರಿಗೆ ಎದುರಾಗಿದೆ. ಕೆಂಭಾವಿ&ಯಡಿಯಾಪುರ ರಸ್ತೆಯ ಮುರಕನಾಳ ಶಾಲೆ ಕಟ್ಟಡದ ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದರಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವಕ್ಕೆ ಯಾವಾಗ ಆಪತ್ತು ಕಾದಿದೆಯೋ ಎಂಬ ದುಗುಡ ಪಾಲಕರಲ್ಲಿದೆ.
ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ ಎಂಬ ಮಹದಾಸೆಯಿಂದ ಸರ್ಕಾರ ಪ್ರತಿ ಗ್ರಾಮದಲ್ಲಿ ಸರ್ಕಾರಿ ಶಾಲೆ ತೆರೆದಿದೆ. ಆದರೆ ಮುರಕನಾಳ ಶಾಲೆ ಕಟ್ಟಡ 30 ವರ್ಷ ಹಳೆಯದು. ಸಾಕಷ್ಟು ಜಾಗ, ನೀರಿನ ಸೌಕರ್ಯ, ಸುಸಜ್ಜಿತ ಕಂಪೌಂಡ್ ಸೇರಿ ಎಲ್ಲ ಪೂರಕ ವಾತಾವರಣವಿದ್ದರೂ ಕಟ್ಟಡ ಶಿಥಿಲಗೊಂಡು ಮೇಲ್ಛಾವಣಿ ಸಿಮೆಂಟ್ ಕಾಂಕ್ರೀಟ್ ಕಿತ್ತುಹೋಗಿದ್ದಲ್ಲದೆ ಭೀಮ್ಗಳು ಹಾಳಾಗಿದ್ದರಿಂದ ನೆಲಸಮಗೊಳಿಸಬೇಕು ಎಂಬುದು ಪಾಲಕರ ಒತ್ತಾಯವಾಗಿದೆ.
ಇನ್ನು ಕೆಂಭಾವಿ ಹಿಲ್ಟಾಪ್ ಕಾಲನಿ ಸರ್ಕಾರಿ ಶಾಲೆಯಲ್ಲಿ ಐದಾರು ವರ್ಷ ಹಿಂದೆಯೇ ನಿರ್ಮಿಸಿದ ತರಗತಿ ಕೋಣೆಗಳಲ್ಲಿ ಒಂದು ಸಂಪೂರ್ಣ ನೆಲಕಚ್ಚಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಉಳಿದ 4 ಕೊಠಡಿಗಳ ಸಿಮೆಂಟ್ ಕಾಂಕ್ರೀಟ್ ಕಿತ್ತಿ ಬೀಳುವ ಹಂತಕ್ಕೆ ತಲುಪಿದ್ದು, ಏಕೈಕ ಕೋಣೆಯಲ್ಲೇ ಮಕ್ಕಳಿಗೆ ಪಾಠ ಬೋಧನೆ ಮಾಡಬೇಕಿದೆ. ಇದು ಕೇವಲ ಎರಡು ಶಾಲೆ ಸ್ಥಿತಿಗತಿಯಾದರೆ, ಶಿಕ್ಷಣ ಇಲಾಖೆ ವಲಯದಲ್ಲಿರುವ ಇಂಥ ಶಿಥಿಲಾವಸ್ಥೆ ತಲುಪಿರುವ ಶಾಲೆಗಳ ಸಮಗ್ರ ಮಾಹಿತಿ ಪಡೆದು ದುರಸ್ತಿಗೊಳಿಸಿ ಸಂಭವನೀಯ ಅವಡ ತಪ್ಪಿಸುವುದು ಸದ್ಯದ ಜರೂರಿಯಾಗಿದೆ.
ಕೆಂಭಾವಿ ವಲಯದ ಸರ್ಕಾರಿ ಶಾಲೆ ವಿವರ
ಕಿರಿಯ ಪ್ರಾಥಮಿಕ ಶಾಲೆ 36
ಹಿರಿಯ ಪ್ರಾಥಮಿಕ ಶಾಲೆ 39
ಪ್ರೌಢ ಶಾಲೆ 14
ಒಟ್ಟು 89
ಶಿಥಿಲಾವಸ್ಥೆ ತಲುಪಿರುವ ತರಗತಿ ಕೋಣೆ 125
"
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಆದೇಶದಂತೆ ಪಿಡಬ್ಲುಡಿ ಇಂಜಿನಿಯರ್ ಜತೆಗೂಡಿ ತಾಲೂಕಿನ ಸರ್ಕಾರಿ ಶಾಲೆ ಕಟ್ಟಡಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡುತ್ತಿದ್ದು, ಶಿಥಿಲ ಮತ್ತು ದುರಸ್ತಿಗೆ ಬಂದಿರುವ ಶಾಲೆಗಳ ಕುರಿತು ಸಮಗ್ರ ವರದಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು.
— > ಡಾ.ನಿಂಗರಾಜ ಮೂಲಿಮನಿ ಕ್ಷೇತ್ರ ಶಿಕ್ಷಣಾಧಿಕಾರಿ, ಸುರಪುರ