ಲಖನೌ ಘಟಕದಿಂದ 10ನೇ ಲಕ್ಷ ವಾಣಿಜ್ಯ ವಾಹನ ಬಿಡುಗಡೆ ಟಾಟಾ ಮೋಟಾರ್ಸ್‌ನ ಸಾಧನೆ ಬಗ್ಗೆ ಯೋಗಿ ಮೆಚ್ಚುಗೆ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
Published on
ಬೆಂಗಳೂರು: ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಲಿಮಿಟೆಡ್, ಲಖನೌ ಘಟಕದಿಂದ 10ನೇ ಲಕ್ಷ ವಾಣಿಜ್ಯ ವಾಹನವನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಾಧನೆಗೈದಿದೆ.
ಹೊಸ ವಾಹನ ಅನಾವರಣಗೊಳಿಸಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಟಾಟಾ ಮೋಟಾರ್ಸ್‌ನ ಲಖನೌ ಘಟಕದಿಂದ 10 ಲಕ್ಷ ಟ್ರಕ್‌ಗಳು, ಬಸ್‌ಗಳು ಹೊರಬಂದಿರುವುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಿದೆ. ಇದು ರಾಜ್ಯದ ಸಾಮರ್ಥ್ಯ, ಅಗಾಧ ಶಕ್ತಿ ಹಾಗೂ ಇಲ್ಲಿನ ಪ್ರತಿಭಾವಂತ ಜನರಿಗೆ ಸಂದ ಗೌರವವಾಗಿದೆ. ರಾಜ್ಯವನ್ನು ‘ಒಂದು ಟ್ರಿಲಿಯನ್ ಡಾಲರ್’ ಆರ್ಥಿಕತೆಯನ್ನಾಗಿ ಪರಿವರ್ತಿಸುವುದು ನಮ್ಮ ಗುರಿಯಾಗಿದ್ದು, ಈ ಪಯಣದಲ್ಲಿ ಕೈಗಾರಿಕೆಗಳು ಮತ್ತು ಉದ್ಯಮಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ರಾಜ್ಯವು ವ್ಯವಹಾರಗಳಿಗೆ ಅಭಿವೃದ್ಧಿ ಹೊಂದಲು ಪೂರಕವಾದ ಪರಿಸರ ವ್ಯವಸ್ಥೆ ಹೊಂದಿದೆ. ವಿಶಾಲವಾದ ಗ್ರಾಹಕ ಮಾರುಕಟ್ಟೆ, ಯುವ, ನೈಪುಣ್ಯ ಹೊಂದಿದ ಕಾರ್ಯಪಡೆ ಮತ್ತು ಸುಗಮ ಸಂಪರ್ಕ ವ್ಯವಸ್ಥೆಯ ಬೆಂಬಲ ಹೊಂದಿದೆ. ಕೈಗಾರಿಕಾ ಬೆಳವಣಿಗೆ, ಉದ್ಯೋಗ ಸೃಷ್ಟಿಸಲು, ಕೌಶಲ ವೃದ್ಧಿಸಲು ಮತ್ತು ಸುಸ್ಥಿರ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಇರುವ ಬದ್ಧತೆಯನ್ನು ಈ ಸಾಧನೆ ಬಿಂಬಿಸಲಿದೆ ಎಂದರು.
ಟಾಟಾ ಸನ್ಸ್ ಲಿ.ನ ಅಧ್ಯಕ್ಷ ಎನ್. ಚಂದ್ರಶೇಖರನ್ ಮಾತನಾಡಿ, ಲಖನೌ ಘಟಕದಿಂದ 10 ಲಕ್ಷ ವಾಣಿಜ್ಯ ವಾಹನಗಳ ಉತ್ಪಾದನೆಯು, ಉತ್ತರ ಪ್ರದೇಶ ಸರ್ಕಾರದೊಂದಿನ ನಮ್ಮ ದೀರ್ಘಕಾಲದ ಪಾಲುದಾರಿಕೆ ಬಲವನ್ನು ಪ್ರತಿಬಿಂಬಿಸುತ್ತದೆ. ಮೂರು ದಶಕಗಳಿಗೂ ಅಧಿಕ ಕಾಲ ಈ ಸಹಯೋಗವು ಕೈಗಾರಿಕೆ, ಸರ್ಕಾರ ಮತ್ತು ಸಮುದಾಯಗಳು ಕೈಗಾರಿಕಾ ಶ್ರೇಷ್ಠತೆ ಹೆಚ್ಚಿಸಲು ಮತ್ತು ಜೀವನೋಪಾಯ ಸೃಷ್ಟಿಸಲು ಸಾಧ್ಯವಾಗಿದೆ. ನಮ್ಮ ಸಂಸ್ಥೆಯ ಸಾಧನೆ ಕಾರಣೀಭೂತರಾದ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಉತ್ತರ ಪ್ರದೇಶದ ಎಲ್ಲ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಉತ್ತರ ಪ್ರದೇಶ ಸರ್ಕಾರದ ಡಿಸಿಂ ಬ್ರಿಜೇಶ್ ಪಾಠಕ್, ಟಾಟಾ ಸನ್ಸ್ ಲಿಮಿಟೆಡ್ ಅಧ್ಯಕ್ಷ ಎನ್. ಚಂದ್ರಶೇಖರನ್ ಎಂಡಿ ಗಿರೀಶ್ ವಾಘ್ ಸೇರಿ ಹಿರಿಯ ಅಧಿಕಾರಿಗಳು ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net