ಶಹಾಪುರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಲಾಭ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯಣಿರ್ವಾಹಣಾಧಿಕಾರಿ ಲವೀಶ್ ಒರ್ಡಿಯಾ ಹೇಳಿದರು.
ತಾಲೂಕಿನ ಮದ್ದರಕಿ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ, ಗುಣಮಟ್ಟ ಹಾಗೂ ಭೌತಿಕ ಸ್ಥಿತಿ ಪರಿಶೀಲಿಸಿ ಮಾತನಾಡಿದರು.
ಈ ಯೋಜನೆಯಲ್ಲಿ ಕೂಲಿ ಕಾರ್ಮಿಕರ ಕುಟುಂಬಕ್ಕೆ ವರ್ಷದಲ್ಲಿ ನೂರು ದಿನ ಗ್ರಾಪಂನಿಂದ ನೀಡುವ ಕೂಲಿ ಕೆಲಸದ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಕಾಲದಲ್ಲಿ ಕೂಲಿ ಪಾವತಿಯಾಗುತ್ತಿದೆಯೇ, ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿ ಇತರೆ ಅಗತ್ಯ ಮೂಲ ಸೌಲಭ್ಯಗಳಿವೆ ಎಂದು ವಿಚಾರಿಸಿದ ಅವರು, ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮಸ್ಟರ್ ರೂಲ್ ಹಾಗೂ ಫೋಟೊ ಆಧಾರಿತ ಹಾಜರಾತಿ ಪರಿಶೀಲಿಸಿದರು.
ನರೇಗಾ ಯೋಜನೆ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಬೇಕು. ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಹೆಚ್ಚು ಆಧ್ಯತೆ ನೀಡಿ, ಯೋಜನೆಯಡಿ ಜಾಬ್ ಕಾರ್ಡ್ ಪಡೆದ ಪ್ರತಿ ಕುಟುಂಬಕ್ಕೂ ನೂರು ದಿನಗಳ ಕೂಲಿ ಕೆಲಸದ ಖಾತ್ರಿಯಾಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನರೇಗಾ ಯೋಜನೆಯಡಿ ಈ ಹಿಂದಿನ ಸಾಲಿನಲ್ಲಿ ಅನುಷ್ಠಾನ ಮಾಡಿ ಪೂರ್ಣಗೊಳಿಸದೆ ಇರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಬಾಕಿ ಉಳಿದ ಅನುದಾನಕ್ಕೆ ಅನುಗುಣವಾಗಿ ಜನರಿಗೆ ಕೆಲಸ ಕೊಡಿ, ಕೆಲಸ ಇಲ್ಲ ಎಂದು ಹೇಳಬೇಡಿ, ಈಗಾಗಲೇ 2025&26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅನುಮೊದಿಸಿದ ಸಮುದಾಯ ಕಾಮಗಾರಿ ಇದ್ದರೆ ಗ್ರಾಮ ಪಂಚಾಯಿತಿಗಳಲ್ಲಿನ ಕೂಲಿ ಬೇಡಿಕೆಗೆ ಅನುಸಾರ ಅನುಮೊದನೆ ಪಡೆದು ಕೆಲಸ ಆರಂಭಿಸಬೇಕು ಎಂದು ಸೂಚನೆ ನೀಡಿದರು.
ನರೇಗಾ ಯೋಜನೆ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಜನರಲ್ಲಿ ತಪ್ಪು ಮಾಹಿತಿ ಹೊಗುತ್ತಿದೆ. ಇದು ಸರಿಯಲ್ಲ, ಬೇಸಿಗೆ ಇರುವುದರಿಂದ ರೈತರ ಹೊಲದಲ್ಲಿ ಕೂಲಿಕಾರರಿಗೆ ಕೆಲಸಗಳಿಲ್ಲ, ಹೀಗಾಗಿ ಕೂಲಿ ಕೆಲಸಕ್ಕಾಗಿ ಗ್ರಾಪಂಗೆ ಬರುವ ಜನರಿಗೆ ಸರಿಯಾದ ಮಾಹಿತಿ ನೀಡಿ, ಕೂಲಿ ಕೆಲಸಕ್ಕಾಗಿ ದೂರದ ನಗರ ಪಟ್ಟಣಗಳಿಗೆ ವಲಸೆ ಹೊಗದಂತೆ ಜನರಿಗೆ ಕೆಲಸ ನೀಡಬೇಕು ಎಂದರು.
ಈ ವೇಳೆ ತಾಪಂ ಅಧಿಕಾರಿ ಬಸವರಾಜ ಶರಭೈ, ತಾಪಂ ಸಹಾಯಕ ನಿರ್ದೇಶಕ ಅಕ್ಕನಾಗಮ್ಮ, ಮದ್ದರಕಿ ಗ್ರಾಪಂ ಪಿಡಿಒ ದೇವರಾಜ ಗೋನಾಲ, ನರೇಗಾ ಯೋಜನೆಯ ತಾಂತ್ರಿಕ ಸಂಯೋಜಕ ವೆಂಕಟರಡ್ಡಿ, ತಾಂತ್ರಿಕ ಸಹಾಯಕ ಪ್ರವಿಣ ಕಟ್ಟಿಮನಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಇತರರಿದ್ದರು.