ಕಲಬುರಗಿಯಲ್ಲಿ ಮಹಿಳಾ ಉದ್ಯಮಿಗಳು ಸೋಮವಾರ ಆಯೋಜಿಸಿದ್ದ ಇ&ಕಾಮರ್ಸ್ ತರಬೇತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.ಮುರುಗೇಶ ನಿರಾಣಿ ಮಾತನಾಡಿದರು. ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಶಿವರಾಜ ಇಂಗಿನಶೆಟ್ಟಿ, ಡಾ.ಸರ್ವಮಂಗಳಾ ಪಾಟೀಲ್, ನಳಿನಿ ಮಹಾಗಾಂವಕರ್, ನಮೃತಾ ಪಿ. ಇತರರಿದ್ದರು.
ಕಲಬುರಗಿ:ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಹಿಳೆಯರು ಸಾಕಷ್ಟು ಪ್ರತಿಭಾವಂತರಿದ್ದಾರೆ. ಆದರೆ ಉದ್ಯಮ ಸ್ಥಾಪನೆಯಲ್ಲಿ ದೃಢಸಂಕಲ್ಪದ ಕೊರತೆ ಇದ್ದು, ಮೆಟ್ಟಿನಿಲ್ಲಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯ ಡಾ.ಮುರುಗೇಶ ನಿರಾಣಿ ಹೇಳಿದರು.
ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ(ಕೆಕೆಸಿಸಿಐ) ಸಭಾಂಗಣದಲ್ಲಿ ಅಬುಂಟು ಕನ್ಸೋರ್ಟಿಯಂ ಸೋಮವಾರ ಆಯೋಜಿಸಿದ್ದ ಮಹಿಳಾ ಉದ್ಯಮಿಗಳಿಗೆ ಇ&ಕಾಮರ್ಸ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಸುಧಾಮೂರ್ತಿ ಐಟಿ ಕಂಪನಿ ಸ್ಥಾಪಿಸಿ ಸುಮಾರು ಎರಡು ಲಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದಾರೆ. ಬಯೋಟೆಕ್ನಾಲಜಿ ಅಂತಹ ದೈತ್ಯ ಕಂಪನಿ ಕಟ್ಟಿದ ಕಿರಣ ಮಜುಂದಾರ್ ಶಾ ಅವರು ಲಾಂತರ ಜನರಿಗೆ ಕೆಲಸ ನೀಡಿದ್ದಾರೆ. ಏನಾದರೂ ಉದ್ಯೋಗ ಮಾಡಬೇಕೆಂಬ ಮನಸ್ಸಿದ್ದರೆ ಸಾಧಿಸಬಹುದು ಎಂದು ಪ್ರೇರೇಪಿಸಿದರು.
ಯಾವುದೋ ಒಂದು ವ್ಯಾಪಾರ, ವಹಿವಾಟು, ಕೈಗಾರಿಕೆ ಪ್ರಾರಂಭಿಸಿದಾಗ ಆರಂಭಿಕ ಹಂತದಲ್ಲಿ ಅನೇಕ ಕಷ್ಟಗಳು ಎದುರಾಗುತ್ತವೆ. ಹಾಗಂತ ಹೆದರಿ ಕೈಚೆಲ್ಲಿ ಕೂಡಬಾರದು. ಕಕದಲ್ಲಿ ಹೆಣ್ಮಕ್ಕಳು ಉದ್ಯೋಗದಾತರಾಗಲೂ ಮುಂದೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಕೆಕೆಸಿಸಿಐ ಅಧ್ಯ ಶರಣು ಪಪ್ಪಾ ಮಾತನಾಡಿ, ಮಹಿಳೆಯರು ಉದ್ಯಮಶೀಲತಾ ತರಬೇತಿ ಪಡೆದು ಉದ್ಯಮ ಸ್ಥಾಪನೆಗೆ ಮುಂದೆ ಬರಬೇಕು. ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ಮಹಿಳೆಯರು ಪ್ರತಿಭಾವಂತರಿದ್ದರೂ ಅವಕಾಶ ವಂಚಿತರಾಗುತ್ತಿದ್ದಾರೆ. ಧೈರ್ಯದೊಂದಿಗೆ ಮುಂದೆ ಬಂದಲ್ಲಿ ನಮ್ಮ ಸಂಸ್ಥೆ ಸಹಕಾರ ನೀಡಲಿದೆ ಎಂದು ಅಭಯ ನೀಡಿದರು.
ಸಂಸ್ಥೆ ಸಹ ಸಂಸ್ಥಾಪಕಿ ಡಾ.ಸರ್ವಮಂಗಳಾ ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕೆ&ಲ್ಯಾಂಪ್ ವ್ಯವಸ್ಥಾಪಕ ನಿರ್ದೇಶಕಿ ನಳಿನಿ ಮಹಾಗಾಂವಕರ್, ಕೆಕೆಸಿಸಿಐ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ನಮ್ರತಾ ಪಿ., ಜ್ಯೋತಿ ಬಾಲಕೃಷ್ಣ ಇತರರಿದ್ದರು.
72 ಸಾವಿರ ಜನರಿಗೆ ಉದ್ಯೋಗ
ಹತ್ತಾರು ಕಷ್ಟಗಳ ಮಧ್ಯೆಯೂ ಮುಧೋಳದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದ್ದ ನಾನು ಇಂದು 10 ಲಕ್ಷ ಟನ್ ಕಬ್ಬು ನುರಿಸುವ ಸಾಮರ್ಥ್ಯದ ಹತ್ತು ಸಕ್ಕರೆ ಕಾರ್ಖಾನೆ ಸ್ಥಾಪಿಸಿ 72 ಸಾವಿರ ಜನರಿಗೆ ಉದ್ಯೋಗ ನೀಡಿದ್ದು, 400 ಮೆ.ವಾಟ್ ವಿದ್ಯುತ್, 28 ಲಕ್ಷ ಲೀಟರ್ ಇಥೆನಾಲ್ ಉತ್ಪಾದನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಟಾಪ್ ಐದು ಕಂಪನಿಗಳಲ್ಲಿ ನಮ್ಮದೂ ಸೇರಿದೆ. ಒಂದು ವೇಳೆ ಆರಂಭದಲ್ಲಿ ಎದುರಾದ ಸಮಸ್ಯೆಗೆ ಹೆದರಿ ಕೈಚೆಲ್ಲಿ ಕುಳಿತ್ತಿದ್ದರೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಡಾ.ಮುರುಗೇಶ ನಿರಾಣಿ ತಮ್ಮ ಯಶೋಗಾಥೆ ಬಿಚ್ಚಿಟ್ಟರು. ಮುಂದಿನ ಎರಡು ವರ್ಷದಲ್ಲಿ ಉನ್ನತ ಸ್ಥಾನಕ್ಕೆ ಏರುವ ಗುರಿ ಹೊಂದಲಾಗಿದೆ. 8 ಲಕ್ಷ ರೂ. ಸಾಲದೊಂದಿಗೆ ಒಂದು ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು 100 ಬಾರಿ ಅಲೆದಾಡಿದೆ. ಎರಡನೇ ಬಾರಿ 50 ಲಕ್ಷ ರೂ. ಸಾಲ ಪಡೆಯುವಾಗ 10 ಸಲ ಅಲೆದಾಡಿದೆ. ಇದೀಗ 3200 ಕೋಟಿ ರೂ. ಸಾಲ ಪಡೆಯಲು ನಾನೂ ಯಾವ ಬ್ಯಾಂಕಿಗೂ ಹೋಗಲಿಲ್ಲ. ಖುದ್ದಾಗಿ ಅವರೇ ಮನೆಗೆ ಬಂದು ಸಾಲ ಮಂಜೂರು ಮಾಡಿದ್ದಾರೆ. ನಾವು ಬೆಳೆದಂತೆ ಎಲ್ಲವೂ ನಮಗೆ ವರವಾಗಿ ತಂತಾನೆ ಬರುತ್ತದೆ. ಹೀಗಾಗಿ ಎದುರಾಗುವ ಸಂಕಷ್ಟಗಳಿಗೆ ಎಂದೂ ಹೆದರಬಾರದು. ರಿಸ್ಕ್ ತೆಗೆದುಕೊಂಡರೆ ಸಾಧನೆ ಸಾಧ್ಯ ಎಂಬುದನ್ನು ನೆನಪಿನಲ್ಲಿಡಿ ಎಂದು ಹೇಳಿದರು.
ಬಯೋಪ್ಲಾಸ್ಟಿಕ್ ಕಾರ್ಖಾನೆ ಸ್ಥಾಪನೆ
ಆತ್ಮನಿರ್ಭರ ಭಾರತ ಯೋಜನೆ ಅಡಿ ಮಹಿಳೆಯರು ಕೈಗಾರಿಕೆ ಸ್ಥಾಪನೆಗೆ ಮುಂದೆ ಬರಬೇಕು. ಅದಕ್ಕೆ ಪೂರಕವಾಗಿ ಸಮಗ್ರ ಅಧ್ಯಯನ ಮಾಡಿ ಸವಾಲು ಎದುರಿಸಲು ಸಿದ್ಧರಾಗಬೇಕು. ಕೌಶಲವೂ ಬೆಳೆಸಿಕೊಳ್ಳಬೇಕು. ಏನು ಮಾಡಬೇಕು ಎಂಬ ಬಗ್ಗೆ ನಿಮ್ಮಲ್ಲಿ ಖಚಿತತೆ ಇರಬೇಕು. ಪೂರಕ ತಯಾರಿ ಜತೆ ತರು, ಅನುಭವಿಗಳ ಮಾರ್ಗದರ್ಶನ ಪಡೆದು ಉದ್ಯಮ ಸ್ಥಾಪನೆಗೆ ಮುಂದಾದರೆ ಯಶಸ್ಸು ಕಂಡುಕೊಳ್ಳಬಹುದು. ಮುಂದಿನ ಎರಡು ವರ್ಷದಲ್ಲಿ ಬಯೋಪ್ಲಾಸ್ಟಿಕ್ ಕಾರ್ಖಾನೆ ಸ್ಥಾಪಿಸುವ ಗುರಿ ಇದೆ. ಈ ಮೂಲಕ ಒಂದು ಲಕ್ಷ ಜನರಿಗೆ ಉದ್ಯೋಗ ಒದಗಿಸುವ ಯೋಜನೆ ಇದೆ ಎಂದು ಡಾ.ನಿರಾಣಿ ಹೇಳಿದರು.
"
ಕಲ್ಯಾಣ ಭಾಗದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಕಡಿಮೆ. ಪ್ರತಿಭಾವಂತರಿಗೆ ಕೊರತೆ ಇಲ್ಲವಾದರೂ ಉದ್ಯಮ ಸ್ಥಾಪನೆಯಲ್ಲಿನ ಹತ್ತಾರು ಸಮಸ್ಯೆಯಿಂದಾಗಿ ಹಿಂದೆ ಸರಿಯುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಸರಳೀಕರಣ ವ್ಯವಸ್ಥೆ ಇಂದಿನ ಜರೂರಿಯಾಗಿದೆ.