ರಾಯಚೂರಿನಲ್ಲಿ ನಡೆಯಲಿರುವ ಬಸವ ಉತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಬಸವಕಲ್ಯಾಣದ ಪವಿತ್ರ ಪರುಷ ಕಟ್ಟೆಯಲ್ಲಿ ಸೋಮವಾರ ಬಸವಜ್ಯೋತಿಗೆ ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಚಾಲನೆ ನೀಡಿದರು. ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಪೂಜ್ಯ ಮಾತೆ ಸತ್ಯಾದೇವಿ, ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ, ಸುಮಿತ್ರಾದೇವಿ ದಾವಣಗಾವೆ, ರೇಣುಕಾ, ಮನ್ಮಥ ಸ್ವಾಮಿ, ಗಿರಿಜಾ, ನಿರ್ಮಲಾ ನೀಲಂಗೆ, ಪರಮೇಶ ವಡಗಾಂವ, ಸುಮಿತ್ರಾ, ರೇಖಾ ಹೂಗಾರ ಇದ್ದರು.
ಬಸವಕಲ್ಯಾಣ: ಬಸವ ಬೆಳಗು ನಾಡಿನ ತುಂಬೆಲ್ಲ ಹರಡಲು ಇಂದು ನಾವು ಸಮರ್ಪಣಾ ಮನೋಭಾವದಿಂದ ದುಡಿಯಬೇಕಾಗಿದೆ ಎಂದು ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ರಾಯಚೂರಿನಲ್ಲಿ ಜು.25, 26 ರಂದು ನಡೆಯುವ ಬಸವ ಉತ್ಸವ ಕಾರ್ಯಕ್ರಮದ ಉದ್ಘಾಟನೆಗೆ ನಗರದ ಪವಿತ್ರ ಪರುಷ ಕಟ್ಟೆಯಲ್ಲಿ ಸೋಮವಾರ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಪೂಜ್ಯ ಮಾತೆ ಸತ್ಯಾದೇವಿ ಮತ್ತು ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಬಸವಜ್ಯೋತಿಗೆ ಚಾಲನೆ ನೀಡಿದ ನಂತರ ಶ್ರೀಗಳು ಮಾತನಾಡಿದರು.
ನಾಡಿನಲ್ಲಿ ಬಸವತತ್ವವನ್ನು ಗಟ್ಟಿಯಾಗಿ ಪ್ರಚಾರ ಮಾಡುವ ಕೈಂಕರ್ಯವನ್ನು ಮಾತಾಜಿ ಶಿಷ್ಯರು ಧೈರ್ಯದಿಂದ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಮಾತಾಜಿ ಲಿಂಗೈಕ್ಯ ನಂತರ ರಾಷ್ಟ್ರೀಯ ಬಸವದಳವರು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದಲ್ಲಿ ಹಮ್ಮಿಕೊಂಡ ಕಾರ್ಯದಲ್ಲಿ ತಾವೂ ಭಾಗಿಯಾದ್ದನ್ನು ಸ್ಮರಿಸಿಕೊಂಡರು.
ಗುಣತೀರ್ಥವಾಡಿಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವತತ್ವದ ಯಾವುದೇ ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ ಬಸವಕಲ್ಯಾಣದ ಪವಿತ್ರ ಪರುಷಕಟ್ಟೆಯಿಂದ ಜ್ಯೋತಿ ಹೊತ್ತಿಸಿಕೊಂಡು ಹೋಗುವುದನ್ನು ಎಂದಿನಿಂದಲೂ ರೂಢಿಸಿಕೊಂಡು ಬರಲಾಗಿದೆ. ರಾಯಚೂರಿನಲ್ಲಿ ನಡೆಯುವ ಮೂರನೇ ಬಸವ ಉತ್ಸವ ಯಶಸ್ವಿಗೆ ಇಲ್ಲಿಂದಲೇ ಜ್ಯೋತಿಯನ್ನು ಹೊತ್ತಿಸಿಕೊಂಡು ಹೋಗಲಾಗುತ್ತಿದೆ. ದುಮ್ಮನಸೂರು, ಬೀದರ್, ಮಹಾಗಾಂವ, ಕಲಬುರಗಿ, ಯಾದಗಿರಿ, ದೇವಸೂಗುರಿನಲ್ಲಿ ಪ್ರಚಾರ ಮಾಡುತ್ತಾ ಜ್ಯೋತಿ ಸಾಗಲಿದೆ ಎಂದರು.
ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಮಾನ್ಯತೆಗೆ ಸಂಕಲ್ಪಿಸಿ ನಡೆಯುವ ಬಸವ ಉತ್ಸವ ಲಿಂಗಾಯತರಲ್ಲಿ ಉತ್ಸಾಹ ತುಂಬುವ ಕಾರ್ಯಕ್ರಮ ಇದಾಗಿದ್ದು, ನಾಡಿನಾದ್ಯಂತ ಸುಮಾರು ಐದು ಸಾವಿರ ಬಸವಭಕ್ತರು ಬರುವ ನಿರೀಕ್ಷೆಯಿದೆ. ಬರುವ ಭಕ್ತಾದಿಗಳಿಗೆ ಎರಡು ದಿನ ಪ್ರಸಾದ, ವಸತಿ ವ್ಯವಸ್ಥೆ ಮಾಡಲಾಗಿದ್ದು, ಸರ್ವರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕರೆ ನೀಡಿದರು.
ವಿಶ್ವಗುರು ಬಸವಣ್ಣನವರು ಸಂಸ್ಥಾಪಿಸಿದ ಲಿಂಗಾಯತ ಧರ್ಮ ಇದು. ಸರ್ವ ಸಮಾನತೆ ಸಾರುವ ಧರ್ಮ. ಇಂತಹ ಧರ್ಮವನ್ನು ಕೆಲವರು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಈ ಧರ್ಮವನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ. ಈ ಕಾಲದಲ್ಲಿ ಈ ಧರ್ಮಕ್ಕೆ ಬಹುದೊಡ್ಡ ಶಕ್ತಿಯನ್ನು ತುಂಬಿದವರು ಲಿಂಗಾನಂದ ಶ್ರೀ ಮತ್ತು ಜಗದ್ಗುರು ಮಾತೆ ಮಹಾದೇವಿಯವರು ಹಾಗೂ ರಾಷ್ಟ್ರೀಯ ಬಸವ ದಳದವರು. ಕೋಟಿ ಜನಗಳ ಶಕ್ತಿ ಒಬ್ಬ ಬಸವತತ್ವ ಲಿಂಗಾಯತನಲ್ಲಿದೆ ಎಂಬುದನ್ನು ರಾಷ್ಟ್ರೀಯ ಬಸವದಳದವರು ಸಾಬೀತು ಪಡಿಸುತ್ತಿದ್ದಾರೆ.