ಅಫಜಲಪುರ: ಜನರಿಗೆ ಮೂಲ ಸೌಲಭ್ಯ ಕಲ್ಪಿಸುವುದು ನಮ್ಮ ಧ್ಯೇಯವಾಗಿದ್ದು, ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಳೆ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಾಣಿಸುತ್ತಿದ್ದು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಮಸ್ಯೆಗೆ ಸ್ಪಂದಿಸಬೇಕು. ಜನಸಾಮಾನ್ಯರು ಕರೆ ಮಾಡಿದರೆ ನಿರ್ಲಕ್ಷ್ಯ ವಹಿಸುವುದು ಹಾಗೂ ಮೊಬೈಲ್ ಸ್ವಿಚ್ ಆಫ್ ಮಾಡಿರುವ ಕುರಿತು ದೂರುಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಸ್ತೆ ಬದಿಗೆ ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ಗಿಡುಗಳು ನೆಡುತ್ತಿದ್ದು, ಇಲಾಖೆ ಜತೆಗೆ ರೈತರು ಕೈಜೋಡಿಸಬೇಕು. ಸಸಿಗಳ ರಕ್ಷಣೆಗೆ ಶ್ರಮಿಸಬೇಕು. ಗೊಬ್ಬೂರ (ಬಿ) ಗ್ರಾಮವು ದೊಡ್ಡದಾಗಿದ್ದು ರಾತ್ರಿ ವೇಳೆ ಬರುವ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ವೈದ್ಯರಿರಬೇಕು. ನರೇಗಾ ಯೋಜನೆಯಡಿ ಪಿಡಿಒಗಳು ದುಡಿವ ಕೈಗಳಿಗೆ ಕೆಲಸ ನೀಡಿ, ಅನುಷ್ಠಾನಕ್ಕೆ ಶ್ರಮಿಸಬೇಕು ಎಂದು ತಾಕೀತು ಮಾಡಿದರು.
ಗೊಬ್ಬುರ(ಬಿ) ಗ್ರಾಮದ ರೈತ ಪ್ರಶಾಂತ ಮಾನಕರ್ ಅವರ ತೋಟಕ್ಕೆ ಭೇಟಿ ನೀಡಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ತಾಳೆ ಬೆಳೆ ಪ್ಲಾಂಟೇಶನ್, ಅಂಗನವಾಡಿ ಕೇಂದ್ರ, ಅತನೂರ ಆರ್ಎಂಎಸ್ ಶಾಲೆ, ಅಫಜಲಪುರದಲ್ಲಿ ನಿರ್ಮಿಸಿರುವ ಅರಣ್ಯ ಇಲಾಖೆ ಕಚೇರಿಯನ್ನು ವೀಸಿದರು.