ಸುಳ್ಳು ಸುದ್ಧಿ ಹಬ್ಬಿಸಿದರೆ ಕಠಿಣ ಕ್ರಮ

,
,
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಫೌಜಿಯಾ ತರನ್ನುಮ್​ ಎಚ್ಚರಿಕೆ
  • ಎಲ್​ಪಿಜಿ ಸಿಲಿಂಡರ್​ಗೆ ಕೊರತೆಯಿಲ್ಲ
ಕಲಬುರಗಿ: ಜಿಲ್ಲೆಯಲ್ಲಿ ಪೆಟ್ರೋಲ್​, ಡಿಸೆಲ್​ ಮತ್ತು ಎಲ್​ಪಿಜಿ ಸಿಲಿಂಡರ್​ ಸೇರಿದಂತೆ ಇಂಧನ ಕೊರತೆ ಇಲ್ಲ. ಎಲ್ಲವೂ ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗೆ ಸಾರ್ವಜನಿಕರು ಕಿವಿಗೊಡಬಾರದು. ವದಂತಿ ಹರಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಎಲ್ಲ ತೈಲ ಕಂಪನಿ ಬಳಿ ಮತ್ತು ಪೆಟ್ರೋಲ್​ ಬಂಕ್​ಗಳಲ್ಲಿ ಸಾಕಷ್ಟು ಪ್ರಮಾಣದ ಇಂಧನ ದಾಸ್ತಾನು ಇದೆ. ಪೆಟ್ರೋಲ್​ ಬಂಕ್​ಗಳಿಗೆ ನಿರಂತರವಾಗಿ ಇಂಧನ ಪೂರೈಕೆಯಾಗುತ್ತಿದೆ. ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್​ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿಲ್ಲ. ಜನರು ಆತಂಕಗೊಳ್ಳಬಾರದು. ಸಿಲಿಂಡರ್​, ಇಂಧನ ಅಭಾವ ಕುರಿತು ಸುಳ್ಳು ಸುದ್ದಿ ಹರಡುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್​ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್​ಗಳ ಸರಬರಾಜು ಸಮರ್ಪಕವಾಗಿ ನಡೆಯುತ್ತಿದೆ. ಗೃಹ ಬಳಕೆ ಸಿಲಿಂಡರ್​ ಪಡೆಯಲು ಈ ಹಿಂದೆ ಪಡೆದ ದಿನಾಂಕದಿಂದ 25 ದಿನಗಳ ಬಳಿಕವೇ ನಗರ ಪ್ರದೇಶದ ಗ್ರಾಹಕರು ಬುಕ್ಕಿಂಗ್​ ಮಾಡಬೇಕಾಗುತ್ತದೆ. ಗ್ರಾಮಾಂತರ ಪ್ರದೇಶದ ಗ್ರಾಹಕರು 45 ದಿನಗಳ ಬಳಿಕವೇ ಬುಕ್​ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಾಸ್ತವದ ವಿಷಯ ಅರಿಯದೆ ಗ್ರಾಹಕರು ಗ್ಯಾಸ್​ ಏಜೆನ್ಸಿಗಳಿಗೆ ಮುಗಿಬೀಳುತ್ತಿರುವುದರಿಂದ ಅನಗತ್ಯ ಜನಸಂದಣಿಯಾಗಿ ಗೊಂದಲು ಸೃಷ್ಟಿಯಾಗುತ್ತಿದೆ ಎಂದಿದ್ದಾರೆ.
ಹೆಚ್ಚುವರಿ ದಾಸ್ತಾನು ಮಾಡಬೇಡಿ
ಗೃಹ ಬಳಕೆಯ ಅಡುಗೆ ಅನಿಲ ಗ್ರಾಹಕರು ಹಾಗೂ ವಾಣಿಜ್ಯ ಬಳಕೆ ಗ್ರಾಹಕರಾದ ಹೋಟೆಲ್​, ರೆಸ್ಟೋರೆಂಟ್​ ಮಾಲೀಕರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಜಿಲ್ಲಾಡಳಿತವು ಎಚ್​ಪಿಸಿ, ಐಓಸಿ ಮತ್ತು ಬಿಪಿಸಿ ತೈಲ ಕಂಪನಿಗಳ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಪೆಟ್ರೋಲ್​, ಡಿಸೇಲ್​ ಮತ್ತು ಎಲ್​ಪಿಜಿ ಸಿಲಿಂಡರ್​ ಕೊರತೆಯಾಗದಂತೆ ಬೇಡಿಕೆಗೆ ಅನುಗುಣವಾಗಿ ಅಗತ್ಯ ದಾಸ್ತಾನನ್ನು ಸಂಗ್ರಹಿಸಿಟ್ಟಿಕೊಳ್ಳಲು ಸೂಕ್ತ ಸೂಚನೆ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಹೆಚ್ಚುವರಿಯಾಗಿ ದಾಸ್ತಾನು ಮಾಡಿಟ್ಟುಕೊಳ್ಳಬಾರದು ಎಂದು ಡಿಸಿ ಫೌಜಿಯಾ ತರನ್ನುಮ್​ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net