ನಿರ್ಲಕ್ಷ್ಯ ಕಂಡು ಬಂದರೆ ಕಠಿಣ ಕ್ರಮ

ಬೀದರ್​ ದಣ ಕ್ಷೇತ್ರದ ಮನ್ನಾಏಖೇಳ್ಳಿ ಆಸ್ಪತ್ರೆಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭಾನುವಾರ ಭೇಟಿ ಪರಿಶೀಲಿಸಿ ಸಮಸ್ಯೆ ಕುರಿತು ಡಿಎಚ್​ಒ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿರುವುದು. ಪ್ರಮುಖರಾದ ಸಂತೋಷ ಹಳ್ಳಖೇಡ, ರಾಜಕುಮಾರ ಪಾಂಚಾಳ, ಶಿವಕುಮಾರ ಅಷ್ಟೂರ, ಅರುಣಕುಮಾರ, ಮೋಹನ, ಆಬೇದಲಿ ಇತರರಿದ್ದರು.
ಬೀದರ್​ ದಣ ಕ್ಷೇತ್ರದ ಮನ್ನಾಏಖೇಳ್ಳಿ ಆಸ್ಪತ್ರೆಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭಾನುವಾರ ಭೇಟಿ ಪರಿಶೀಲಿಸಿ ಸಮಸ್ಯೆ ಕುರಿತು ಡಿಎಚ್​ಒ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿರುವುದು. ಪ್ರಮುಖರಾದ ಸಂತೋಷ ಹಳ್ಳಖೇಡ, ರಾಜಕುಮಾರ ಪಾಂಚಾಳ, ಶಿವಕುಮಾರ ಅಷ್ಟೂರ, ಅರುಣಕುಮಾರ, ಮೋಹನ, ಆಬೇದಲಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ದ ಎಚ್ಚರಿಕೆ
  • ಮನ್ನಾಏಖೇಳ್ಳಿ ಆಸ್ಪತ್ರೆಗೆ ಭೇಟಿ, ಪರಿಶೀಲನೆ
ಚಿಟಗುಪ್ಪ: ಮನ್ನಾಏಖೇಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭಾನುವಾರ ಭೇಟಿ ನೀಡಿ ವೈದ್ಯಕಿಯ ಸೇವೆ, ತುರ್ತು ಚಿಕಿತ್ಸಾ ಸೌಲಭ್ಯ ಹಾಗೂ ಸಿಬ್ಬಂದಿ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.
ಇತ್ತೀಚೆಗೆ ಆಸ್ಪತ್ರೆಯಲ್ಲಿ ಮಹಿಳೆ ಹೆರಿಗೆ ನಂತರ ತೀವ್ರ ರಕ್ತಸ್ರಾವಕ್ಕೊಳಗಾಗಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರು.
ಘಟನೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಕಂಡು ಬಂದಲ್ಲಿ ಸಂಬಂಧಿಸಿದ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಸೂಚಿಸಿದರು.
ಇಂತಹ ದುರ್ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಆಸ್ಪತ್ರೆಯ ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಗಲಿದ ಮಹಿಳೆಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದ ಸದಸ್ಯರಿಗೆ ಈ ದು-ಖವನ್ನು ಭರಿಸುವ ಶಕ್ತಿ ಮತ್ತು ಧೈರ್ಯವನ್ನು ಭಗವಂತನು ನೀಡಲಿ ಎಂದು ಶಾಸಕರು ಪ್ರಾರ್ಥಿಸಿದರು.
ಪ್ರಮುಖರಾದ ಸಂತೋಷ ಹಳ್ಳಖೇಡ, ರಾಜಕುಮಾರ ಪಾಂಚಾಳ, ಶಿವಕುಮಾರ ಅಷ್ಟೂರ, ಅರುಣಕುಮಾರ, ಮೋಹನ, ಆಬೇದಲಿ ಇತರರಿದ್ದರು.
ಅಧಿಕಾರಿಗಳಿಗೆ ತರಾಟೆ
ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ತವ್ಯದಲ್ಲಿ ವೈದ್ಯರು ಸೇರಿ ಕೆಲ ಸಿಬ್ಬಂದಿ ಸ್ಥಳದಲ್ಲಿ ಇಲ್ಲದಿರುವುದಕ್ಕೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡಿರುವ ಹಾಗೂ ಸುತ್ತಮುತ್ತಲಿನ ಸುಮಾರು 30 ರಿಂದ 40 ಗ್ರಾಮಗಳಿಗೆ ಈ ಆಸ್ಪತ್ರೆ ಮುಖ್ಯವಾಗಿದೆ. ಆದರೆ ಇಲ್ಲಿನ ಅವ್ಯವಸ್ಥೆ ಕೂಡಲೇ ಸರಿಪಡಿಸಲು ಹಾಗೂ ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ತಕ್ಷಣ ಕ್ರಮ ವಹಿಸುವಂತೆ ಜಿಲ್ಲಾ ವೈದ್ಯಾಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net