ಚಿಂಚೋಳಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಸವರಾಜ ಮಾಲಿ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆ ಸಭೆ ನಡೆಯಿತು. ಸುಬ್ಬಣ್ಣ ಜಮಖಂಡಿ, ಸಂತೋಷಕುಮಾರ ಚವ್ಹಾಣ್ ಇದ್ದರು.
ಚಿಂಚೋಳಿ: ನ್ಯಾಯಬೆಲೆ ಅಂಗಡಿ ಮಾಲೀಕರು ಬದುಕಿನಲ್ಲಿ ಮಾನವೀಯತೆ ಅಳವಡಿಸಿಕೊಳ್ಳಬೇಕು, ಜತೆಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯ ಬಸವರಾಜ ಮಾಲಿ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯಬೆಲೆ ಅಂಗಡಿ ಮಾಲೀಕರು ಬಡವರಿಂದ 10& 20 ರೂ. ಪಡೆಯುವುದು ಹಾಗೂ 1 ಕೆಜಿ ಕಡಿಮೆ ಆಹಾರ ಧಾನ್ಯ ವಿತರಣೆ ಮಾಡುವುದು ಕೂಡಲೇ ನಿಲ್ಲಿಸಬೇಕು. ಸಮಯ ಪಾಲನೆ ಮಾಡಬೇಕು. ನಾಮಫಲಕ ಅಳವಡಿಸಬೇಕು ಎಂದು ಸೂಚನೆ ನೀಡಿದರು.
ಆಹಾರ ಧಾನ್ಯ ಪಡೆದು ಕಾನೂನು ಬಾಹಿರವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಫಲಾನುಭವಿಗಳ ಪಡಿತರ ಚೀಟಿ ರದ್ದು ಪಡಿಸಲು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಗ್ರಾಮಗಳಲ್ಲಿ ಅಕ್ರಮ ಅಕ್ಕಿ ಖರೀದಿ ನಡೆಯುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತನ್ನಿ. ತಾಲೂಕಿನಲ್ಲಿ ಈಗಾಗಲೇ ಅಂದಾಜು 20 ಲ ರೂ. ಬೆಲೆಯ ಅಕ್ಕಿ ಜಪ್ತಿಯಾಗಿದ್ದು, ಇನ್ನೂ ಅಕ್ರಮ ಚಟುವಟಿಕೆ ಹೆಚ್ಚಾಗಿದೆ. ತಡೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.