ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಿ

ಕಲಬುರಗಿ ಡಿಸಿ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಮೇರಾ ಭಾರತ ಮಹಾನ್​ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುರುವಾರ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಮಾತನಾಡಿದರು. ಅಧಿಕಾರಿಗಳು ಇದ್ದರು.
ಕಲಬುರಗಿ ಡಿಸಿ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಮೇರಾ ಭಾರತ ಮಹಾನ್​ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುರುವಾರ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಮಾತನಾಡಿದರು. ಅಧಿಕಾರಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಸೂಚನೆ
  • ಸಲಹಾ ಸಮಿತಿ ಸಭೆಯಲ್ಲಿ ಮೇರಾ ಯುವ ಭಾರತ್​ ಚರ್ಚೆ
ಕಲಬುರಗಿ: ಕೇಂದ್ರ ಸರ್ಕಾರ ಮೇರಾ ಯುವ ಭಾರತ ಯೋಜನೆಯಡಿ ಯುವ ಸಮುದಾಯದಲ್ಲಿ ನಾಯಕತ್ವ, ಸಮುದಾಯ ಬೆಳವಣಿಗೆ, ಕ್ರೀಡೆ ಅಯೋಜನೆ ಸೇರಿ ರಾಷ್ಟ್ರೀಯ ಸಹೋದರತ್ವ ಮೂಡಿಸಲು 2026-27ನೇ ಸಾಲಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗುವಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಸೂಚಿಸಿದರು.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಂದ್ರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ ಕಚೇರಿಯಿಂದ 2026-27ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಜಾರಿಗೆ ಸಂಬಂಧಿಸಿದಂತೆ ಗುರುವಾರ ನಡೆದ ಮೇರಾ ಭಾರತ್​ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 15 ರಿಂದ 29 ವರ್ಷ ಯುವ ಯುವತಿಯರು ಹೆಸರು ನೋಂದಣಿ ಮಾಡಿಕೊಳ್ಳಲು ಅರ್ಹರಿದ್ದಾರೆ. ಜಿಲ್ಲೆಯ ಎಲ್ಲಾ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಐ.ಟಿ.ಐ-ಡಿಪ್ಲೋಮಾ, ಇಂಜಿನಿಯರಿಂಗ್​, ಮೆಡಿಕಲ್​ ಕಾಲೇಜುಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ನೋಂದಣಿ ಮಾಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನೋಂದಣಿ ಅಭಿಯಾನ
ಮುಂದಿನ ದಿನದಲ್ಲಿ ನೋಂದಾಯಿತ ಯುವ ಜನರಿಗೆ ಕೇಂದ್ರ ಸರ್ಕಾರ ಸ್ಥಳಿಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪೂರಕ ಕಾರ್ಯಕ್ರಮಗಳು, ಕೌಶಲ ತರಬೇತಿ, ನಶಾ ಮುಕ್ತ ಭಾರತ, ಕ್ರೀಡಾಕೂಟಗಳ ಆಯೋಜನೆ, ಕ್ರೀಡಾ ಸಲಕರಣೆ ವಿತರಣೆ, ಯುವ ಕ್ಲಬ್​ ಅಭಿವೃದ್ಧಿ, ವಿಕ್ಸಿತ್​ ಭಾರತ ಯುವ ನಾಯಕತ್ವ ಬಲವರ್ಧನೆ, ರಾಷ್ಟ್ರೀಯ ಯುವಜನೋತ್ಸವ ಆಯೋಜನೆದಂತಹ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ಆಗಸ್ಟ್​ 15ರವರೆಗೆ ನಡೆಯುವ ನೋಂದಣಿ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಸಮೂಹ ನೋಂದಣಿ ಮಾಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನೋಂದಣಿಗೆ ನೀರಸ ಪ್ರತಿಕ್ರಿಯೆ
ಮೇರಾ ಯುವ ಭಾರತ ಅಧಿಕಾರಿ ಸುಮಿತ್​ ಫರ್ಕಿ ಮಾತನಾಡಿ, 2026-27ನೇ ಸಾಲಿನ ಕ್ರಿಯಾ ಯೋಜನೆ, ಕಾರ್ಯಕ್ರಮಗಳ ರೂಪುರೇಷೆ ಕುರಿತು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಈಗಾಗಲೆ ನೋಂದಣಿ ಆರಂಭವಾಗಿದ್ದು, ಈವರೆಗೆ ತುಂಬಾ ಕಡಿಮೆ ಸಂಖ್ಯೆಯಲ್ಲಿ ನೋಂಣಿಯಾಗಿದೆ. ಜಿಲ್ಲೆಯ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ನೋಂಣಿಗೆ ಇಲಾಖೆಗೆ ಸಹಕಾರ ನೀಡಬೇಕು. 15 ರಿಂದ 29 ವಯಸ್ಸಿನ ಯುವ-ಯುವತಿಯರು ಆಗಸ್ಟ್​ 15ರೊಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಗದೇವಪ್ಪ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು, ಡಿಡಿಪಿಐ, ಡಿಡಿಪಿಯು, ಎನ್​ಸಿಸಿ, ಕೌಶಲಾಭಿವೃದ್ಧಿ ಸೇರಿ ಅಧಿಕಾರಿಗಳು ಭಾಗವಹಿಸಿದ್ದರು.
"

ನೋಂದಣಿ ಕಾರ್ಯ ಯಶಸ್ವಿಗೆ ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ಮೇರಾ ಭಾರತ್​ ಕ್ಯಾಂಪಸ್​ ರಾಯಭಾರಿ ಮತ್ತು ನೋಡಲ್​ ಅಧಿಕಾರಿ ನೇಮಿಸಬೇಕು. ವಿದ್ಯಾರ್ಥಿಗಳ ಗರಿಷ್ಠ ನೋಂದಣಿಯನ್ನು ಸಂಸ್ಥೆ ಮುಖ್ಯಸ್ಥರಿಂದ ಖಚಿತಪಡಿಸಿಕೊಳ್ಳಬೇಕು.

— ಇಕ್ರಮ್​ ಶರೀಫ್​, ಜಿಲ್ಲಾಧಿಕಾರಿ, ಕಲಬುರಗಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net