ಇಟಗಿ: ಕೀರ್ತನ ಕೇಸರಿ ಎಂದೇ ಹೆಸರಾಗಿದ್ದ ಲಿಂಗೈಕ್ಯ ಸೋಮಯ್ಯ ಸ್ವಾಮೀಜಿ ಸಾಮಾಜಿಕ ಚಿಂತನೆ ಹಾಗೂ ಆದರ್ಶ ಮೌಲ್ಯಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ಶ್ರೀ ಮಠದ ಅದೃಶ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಮೀಪದ ತೋಲಗಿ ಗ್ರಾಮದ ಸೋಮಲಿಂಗೇಶ್ವರ ಆಶ್ರಮದ ಚಿಕ್ಕಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಲಿಂ.ಸೋಮಯ್ಯ ಸ್ವಾಮೀಜಿ 33ನೇ ಪುಣ್ಯಾರಾಧನೆ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಇಂದಿನ ಜನಾಂಗಕ್ಕೆ ಸೋಮಯ್ಯ ಸ್ವಾಮೀಜಿ ತಾತ್ವಿಕ ಚಿಂತನೆ ತಿಳಿಸುವುದು ಪುಣ್ಯಾರಾಧನೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಹಿಡಕಲ್ ಅಡವಿ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಮಹಾತ್ಮರನ್ನು ಸ್ಮರಿಸುವ ಮೂಲಕ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಲು ಧಾರ್ಮಿಕ ಕಾರ್ಯಕ್ರಮಗಳು ಅವಶ್ಯ ಎಂದರು. ದತ್ತವಾಡ ಹೃಷಿಕೇಶಾನಂದ ಸ್ವಾಮೀಜಿ, ಕಾದರವಳ್ಳಿ ಗುರುಪುತ್ರ ಮಹಾರಾಜರು, ಶಿವಾನಂದ ಸ್ವಾಮೀಜಿ, ಬ್ರಹ್ಮಾನಂದ ಸ್ವಾಮೀಜಿ, ನಂದಗಡ ಪಿಎಸ್ಐ ಎಂ.ಎನ್.ಬದಾಮಿ, ವಿಜಯಕುಮಾರ ಸಾಣಿಕೊಪ್ಪ, ಶ್ರೀಶೈಲ ತುರಮರಿ, ಇಕ್ಬಾಲ್ ನದಾ, ಡಾ.ಬಿ.ಆರ್.ರಂಗಣ್ಣವರ, ಮಂಜುನಾಥ ಹದಗಲ, ಭರತೇಶ ಹಂದೂರ, ದೇಮಣ್ಣ ಕಮ್ಮಾರ ಇತರರಿದ್ದರು.