ಸುಶೀಲ ರಸ್ತೆಬದಿಯಲ್ಲಿ ಕಸದ ರಾಶಿ:ಹಲವು ದಿನಗಳಿಂದ ವಿಲೇ ಆಗದ ಘನತ್ಯಾಜ್ಯ- Garbage

 ಸುಶೀಲ ರಸ್ತೆಬದಿಯಲ್ಲಿ ಬಿದ್ದಿರುವ ರಾಶಿ ಕಸ
ಸುಶೀಲ ರಸ್ತೆಬದಿಯಲ್ಲಿ ಬಿದ್ದಿರುವ ರಾಶಿ ಕಸ
Published on
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಕಚೇರಿಯಿಂದ ಅರ್ಧ ಕಿಮೀ ದೂರದಲ್ಲಿರುವ ಸುಧಾಮನಗರ ವಾರ್ಡ್ ವ್ಯಾಪ್ತಿಯ ಸುಶೀಲ ರಸ್ತೆಬದಿಯಲ್ಲಿ ಬಿದ್ದಿರುವ ರಾಶಿರಾಶಿ ಕಸವನ್ನು ಹಲವು ದಿನಗಳಿಂದ ಅಧಿಕಾರಿಗಳು ತೆರವು ಮಾಡಿಲ್ಲ. ಈ ಬಗ್ಗೆ ಜಿಬಿಎ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಿನರ್ವ ವೃತ್ತದಿಂದ ಜೆ.ಸಿ. ರಸ್ತೆ ಪ್ರವೇಶಿಸುತ್ತಿದ್ದಂತೆ ಮುಂದೆ ಬಲಭಾಗಕ್ಕೆ ತೆಗೆದುಕೊಂಡರೆ ಸುಶೀಲ ರಸ್ತೆ ಬರಲಿದೆ. ಈ ರಸ್ತೆ ಪಕ್ಕದಲ್ಲಿ ಪಟೇಲ್ ಎಂ.ಕೆಂಪಯ್ಯ ಗಿರಿಯಮ್ಮ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಈ ರಸ್ತೆಯಿಂದ ಸ್ವಲ್ಪ ದೂರ ಮುಂದಕ್ಕೆ ತೆರಳಿದರೆ ಸಿದ್ದಯ್ಯ ರಸ್ತೆ ಸಿಗಲಿದೆ. ಈ ರಸ್ತೆಯಲ್ಲಿ ಎಚ್. ಸಿದ್ದಯ್ಯ ಹೆರಿಗೆ ಆಸ್ಪತ್ರೆ ಇದೆ. ಈ ಎರಡು ಆಸ್ಪತ್ರೆಗಳ ಅನತಿ ದೂರದಲ್ಲೇ 2-3 ಕಸ ಜಾಗವು ಬ್ಲ್ಯಾಕ್‌ಸ್ಪಾಟ್‌ಗಳಾಗಿ ಮಾರ್ಪಟ್ಟಿವೆ. ಗರ್ಭಿಣಿಯರು ಸೇರಿ ಪ್ರತಿನಿತ್ಯ ನೂರಾರು ರೋಗಿಗಳು ಈ ಆಸ್ಪತ್ರೆಗೆ ಆಗಮಿಸುತ್ತಾರೆ. ಸೊಳ್ಳೆಕಾಟದಿಂದ ನವಜಾತು ಶಿಶುಗಳಿಗೆ ಮಲೇರಿಯಾ ಮತ್ತು ಡೆಂಘೆದಂತಹ ರೋಗಗಳು ಕಾಣಿಸಿಕೊಳ್ಳುತ್ತಿವೆ.
ರಸ್ತೆಯಲ್ಲಿ ಸಾಕಷ್ಟು ವಾಣಿಜ್ಯ ಅಂಗಡಿಗಳು ಮತ್ತು ಮನೆಗಳಿವೆ. ಸ್ಥಳೀಯರು, ಮಾಲೀಕರು ತ್ಯಾಜ್ಯ ಬಿಸಾಡುತ್ತಿದ್ದಾರೆ. ಪ್ರತಿನಿತ್ಯ ಕಸ ವಿಲೇವಾರಿ ಮಾಡದ ಪರಿಣಾಮ ಕಸದ ರಾಶಿ ಗಬ್ಬೆದ್ದು ನಾರುತ್ತಿದೆ. ತಿಂಗಳು ಕಳೆದರೂ ಕಸ ತೆರವು ಮಾಡುತ್ತಿಲ್ಲ. ಇದರಿಂದ ಸೊಳ್ಳೆ ಕಾಟ, ಅನೈರ್ಮಲ್ಯ ವಾತಾವರಣದಿಂದ ಸ್ಥಳೀಯ ನಿವಾಸಿಗಳ ಆರೋಗ್ಯ ಹದಗೆಟ್ಟು ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಹಾಗಾಗಿ, ರಾತ್ರಿ ವೇಳೆ ಸುತ್ತಮುತ್ತ ಅಂಗಡಿಯವರು ತ್ಯಾಜ್ಯ ಸೇರಿ ಸೀಟ್ ಕುಶನ್ ಬಿಸಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ರಾತ್ರಿ ವೇಳೆ ಮಾರ್ಷಲ್‌ಗಳನ್ನು ನೇಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
30 ದಿನಕ್ಕೊಮ್ಮೆ ಕಸ ವಿಲೇ!
ಕಸ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಹೆಲ್ತ್ ಇನ್‌ಸ್ಪೆಕ್ಟರ್ ಸೇರಿ ಜಿಬಿಎ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. 30 ದಿನಕ್ಕೊಮ್ಮೆ ಕಸ ವಿಲೇವಾರಿ ಮಾಡಲು ಬರುತ್ತಾರೆ. ಮನೆಮನೆಯಿಂದ ಕಸ ಸಂಗ್ರಹಿಸಲು ಯಾರೂ ಬರುತ್ತಿಲ್ಲ. ಹಲವು ದಿನಗಳಿಂದ ವಿಲೇವಾರಿ ಮಾಡದ ಪರಿಣಾಮ ಕಸದ ರಾಶಿ ರಸ್ತೆ ತುಂನೆಲ್ಲ ಹರಡಿರುತ್ತದೆ. ಸಮಸ್ಯೆಗೆ ಇದಕ್ಕೆ ಜಿಬಿಎ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net