‘ಗೃಹಲಕ್ಷ್ಮಿ’ ತನಿಖೆಗೆ ಎಸ್‌ಐಟಿ ರಚಿಸಿ

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್
Published on
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ 225 ಕೋಟಿ ರೂ. ನಕಲಿ ಖಾತೆಗಳಿಗೆ ವರ್ಗಾವಣೆ ಆಗಿರುವ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ವಿಧಾನಸೌಧದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ, ಇದೊಂದು ಸರ್ಕಾರಿ ಪ್ರಾಯೋಜಿತ ಲೂಟಿಯಾಗಿದೆ.
225 ಕೋಟಿ ರೂ.ಅಕ್ರಮ ಆಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಿದ್ದರೂ ಕ್ರಮವಹಿಸಿಲ್ಲ. ನಕಲಿ ಖಾತೆಗಳಿಗೆ ಹಣ ಸಂದಾಯವಾಗಿದ್ದು, ಅಧಿಕಾರಿ ಮತ್ತು ರಾಜಕಾರಣಿಗಳ ದೊಡ್ಡ ಗ್ಯಾಂಗ್ ಇದರ ಹಿಂದಿದೆ. ಸತ್ತವರ ಹೆಸರಿಗೆ ಹಣ ಹೋಗಿದೆ ಎಂದರೆ ಕಂದಾಯ ಇಲಾಖೆ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿಗಳು ಏನು ಮಾಡುತ್ತಿವೆ ಎಂದು ಪ್ರಶ್ನಿಸಿದರು.
ಕರ್ನಾಟಕ ಐಟಿ ರಾಜ್ಯ ಎಂದು ಹೆಸರಾಗಿದ್ದರೂ ಸರ್ಕಾರಕ್ಕೆ ಸತ್ತವರ ಹೆಸರಿಗೆ ಹಣ ಹೋಗುವುದನ್ನು ತಡೆಯಲು ಸಾಧ್ಯವಾಗಿಲ್ಲ. ಸಾಫ್ಟ್‌ವೇರ್ ತಯಾರಿಸಿ ಸತ್ತವರ ಹೆಸರಲ್ಲಿ ಹಣ ಲೂಟಿ ಮಾಡಲಾಗಿದೆ. ಇದು ಅತಿ ದೊಡ್ಡ ಸೈಬರ್ ಕ್ರೈಂ ಆಗಿದ್ದು, ತನಿಖೆ ಮಾಡಿಸಲೇಬೇಕಿದೆ. 2.11 ಲಕ್ಷ ಫಲಾನುಭವಿಗಳು ಸತ್ತಿದ್ದಾರೆ ಎಂದು ಗೊತ್ತಾಗಿದೆ.
ಇನ್ನೂ 77 ಸಾವಿರ ಜನರ ದತ್ತಾಂಶ ಪತ್ತೆಯಾಗಿಲ್ಲ. ಈಗಾಗಲೇ 5 ಸಾವಿರ ಕೋಟಿ ರೂ.ನುಂಗಿದ್ದು, ಈಗ ಮತ್ತೆ ಹಗರಣ ನಡೆದಿದೆ. ಕಾಂಗ್ರೆಸ್‌ನ ನಿರಾಶ್ರಿತರಿಗೆ ಪದವಿ ಕೊಡಲು ಗ್ಯಾರಂಟಿ ಸಮಿತಿ ರಚಿಸಿ ಅದಕ್ಕೆ 150 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಈ ಸಮಿತಿ ಅಕ್ರಮ ತಡೆದಿಲ್ಲ. ಇವರೇ ಅಕ್ರಮಗಳ ಸರದಾರರು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net