ಪೌತಿ ಖಾತೆ ಆಂದೋಲನ ಸರಳೀಕರಣ

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ಇ-ಪೌತಿ ತಂತ್ರಾಂಶ ಸಮಸ್ಯೆಯಿಂದ ಪೌತಿ ಖಾತೆ ಆಂದೋಲನಕ್ಕೆ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆಯಲು ಕಂದಾಯ ಇಲಾಖೆ 13 ಅಂಶಗಳ ಮಾರ್ಗಸೂಚಿ ಪ್ರಕಟ ಮಾಡಿದೆ.
ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ ಖಾತೆ ಮೂಲಕ ಮಾಲೀಕತ್ವ ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆ ಆಗಬೇಕು. ಆಗದಿದ್ದರೆ ಕುಟುಂಬಸ್ಥರಿಗೆ ಅಭಿವೃದ್ಧಿಪಡಿಸಲು ಸಾಲ-ಸೌಕರ್ಯಗಳು ದೊರೆಯುವುದಿಲ್ಲ. ಪ್ರಕೃತಿ ವಿಕೋಪದ ವೇಳೆ ಸರ್ಕಾರದಿಂದ ನೀಡಲಾಗುವ ವಿಮೆ/ಪರಿಹಾರ ಸಿಗುವುದಿಲ್ಲ. ಪಿಎಂ ಕಿಸಾನ್ ಸೌಲಭ್ಯ ಪಡೆಯಲು ಕಷ್ಟವಾಗುತ್ತದೆ. ಈ ಸಮಸ್ಯೆ ತೊಡೆದು ಹಾಕಿ ರೈತರಿಗೆ ಪೌತಿ ಖಾತೆಯ ಮ್ಯುಟೇಶನ್ ಪ್ರಕ್ರಿಯೆ ಸರಳೀಕೃತಗೊಳಿಸಲು ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪಹಣಿಗೆ ಆಧಾರ್ ಸೀಡಿಂಗ್ ವೇಳೆ ಗ್ರಾಮ ಆಡಳಿತಾಧಿಕಾರಿ(ವಿಎ)ಗಳು ಮನೆಮನೆಗೆ ಭೇಟಿ ನೀಡಿದಾಗ ಮಾಲೀಕರು ಮೃತಪಟ್ಟಿದ್ದರೆ ಪೌತಿ ಎಂದು ಗುರುತಿಸಲಾಗಿರುತ್ತದೆ. ಈ ಮಾಹಿತಿಯನ್ನು ಇ-ಪೌತಿ ತಂತ್ರಾಂಶದಲ್ಲಿ ಸಂಬಂಧಪಟ್ಟ ವಿಎಗಳ ಲಾಗಿನ್‌ಗೆ ಈಗಾಗಲೇ ವರ್ಗಾಯಿಸಲಾಗಿರುತ್ತದೆ.
ಮರಣ ಪ್ರಮಾಣಪತ್ರ ಹಾಗೂ ಅಟಲ್ ಜೀ ಜನಸ್ನೇಹಿ ಕೇಂದ್ರದಿಂದ ಪಡೆದಿರುವ ವಂಶವೃಕ್ಷವನ್ನು ಮೃತನ ಕುಟುಂಬದಿಂದ ಪಡೆದು ತಂತ್ರಾಂಶದಲ್ಲಿ ನಮೂದಿಸಬೇಕು. ಒಂದು ವೇಳೆ ಇಲ್ಲದಿದ್ದರೆ ನೋಟರಿಯವರ ಸಮಕ್ಷಮ ಸಹಿ ಮಾಡಿ ಅಟಲ್‌ಜೀ ಕೇಂದ್ರದಲ್ಲಿ ಮನವಿ ದಾಖಲಿಸಿ, ವಂಶವೃಕ್ಷ ಪಡೆಯಬಹುದು. ಇದರ ಮೇರೆಗೆ ವಿಎ ಪೌತಿ ವಿವರಗಳನ್ನು ದಾಖಲಿಸಲು ಅವಕಾಶವಿರುತ್ತದೆ.
ಡೆತ್‌ನೋಟ್ ಇಲ್ಲದಿದ್ದರೆ ಆಧಾರ್ ಮತ್ತು ಪಡಿತರ ಚೀಟಿ ದಾಖಲೆಗಳನ್ನು ಪರಿಶೀಲಿಸಿಕೊಂಡು ವಿಎಗಳು ಮಹಜರು ಮಾಡಿ ವಾರಸುದಾರರಿಂದ ಅಫಿಡವಿಟ್ ಪಡೆದು, ಪಡಿತರಚೀಟಿ ಮತ್ತು ಆಧಾರ್ ಜತೆಗೆ ಪೌತಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ದಾಖಲಿಸಬಹುದು. ಈ ವೇಳೆ ವಿಡಿಯೋ ಮಹಜರು ಮಾಡಿ ಕಡ್ಡಾಯವಾಗಿ ಇ-ಪೌತಿ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕು.
ಮೃತ ಖಾತೆದಾರನ ಮರಣ ಪ್ರಮಾಣಪತ್ರ, ಆಧಾರ್ ಮತ್ತು ಪಡಿತರ ಚೀಟಿ ಇಲ್ಲದಿದ್ದರೆ ಗ್ರಾಮಸ್ಥರ ಮಹಜರಿನೊಂದಿಗೆ ಹಾಗೂ ಕುಟುಂಬ ಸದಸ್ಯರ ನೋಟರಿ ಪ್ರಮಾಣ ಪತ್ರ, ಕುಟುಂಬ ಸದಸ್ಯರ ಆಧಾರ್ ಪಡೆದು ಖಾತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ತಕರಾರು ಪ್ರಕರಣ ಇತ್ಯರ್ಥ

ಇ-ಪೌತಿ ತಂತ್ರಾಂಶದಲ್ಲಿ ನಮೂದಿಸಿದ ಅರ್ಜಿಗಳ ಕುರಿತು ಹಕ್ಕು ಬದಲಾವಣೆಯ ಪ್ರಕರಣಗಳಲ್ಲಿ ನಮೂನೆ-12 ಮತ್ತು ನಮೂನೆ-21ನ್ನು ಹೊರಡಿಸಲಾಗುತ್ತದೆ. ಈ ವೇಳೆ ಮ್ಯುಟೇಶನ್ ವಿಲೇವಾರಿಗೆ 15 ದಿನ ಕಾಲಾವಕಾಶ ಇರುತ್ತದೆ. ಆಸಕ್ತರು ತಕರಾರುಗಳನ್ನು ತಹಸೀಲ್ದಾರ್ ಕಚೇರಿಗೆ ಸಲ್ಲಿಸಬಹುದು. ತಕರಾರುಗಳು ಬಂದರೆ ವಹಿವಾಟು ವಿವಾದಾಸ್ಪದ ಪ್ರಕರಣಗಳ ಪಟ್ಟಿಗೆ ಸೇರಿಸಲ್ಪಡುತ್ತದೆ. ಆಂದೋಲನದಲ್ಲಿ ಸ್ವೀಕೃತವಾಗುವ ತಕರಾರುಗಳನ್ನು ಖುದ್ದಾಗಿ ತಹಸೀಲ್ದಾರ್ ಗ್ರೇಡ್-1, ತಹಸೀಲ್ದಾರ್ ಗ್ರೇಡ್-2 ಒಂದು ತಿಂಗಳೊಳಗೆ ಆರ್‌ಸಿಸಿಎಂಎಸ್ ತಂತ್ರಾಂಶದಲ್ಲಿ ನಿಯಮಾನುಸಾರ ವಿಲೇವಾರಿ ಮಾಡಬೇಕಾಗಿರುತ್ತದೆ. ತಹಸೀಲ್ದಾರ್ ಗ್ರೇಡ್-2 ಹುದ್ದೆ ಇಲ್ಲದಿದ್ದಲ್ಲಿ ಅಥವಾ ಖಾಲಿ ಇದ್ದಲ್ಲಿ, ಗ್ರೇಡ್-1 ತಹಸೀಲ್ದಾರರು ತಕರಾರುಗಳನ್ನು ಇತ್ಯರ್ಥಪಡಿಸುವುದು.

ಒಬ್ಬ ಒಪ್ಪಿಕೊಂಡರೆ ತಕರಾರು:

ಮೃತ ಖಾತೆದಾರರ ಪೈಕಿ ಯಾವುದೇ ಒಬ್ಬ ವಾರಸುದಾರರು ಆಧಾರ್ ಇ-ಕೆವೈಸಿ ಮಾಡಲು ಒಪ್ಪಿಗೆ ನೀಡದಿದ್ದಲ್ಲಿ, ವಿಎಗಳು ಇ-ಪೌತಿ ತಂತ್ರಾಂಶದಲ್ಲಿ ಆಧಾರ್ ಇ-ಕೆವೈಸಿ ನೀಡಲು ನಿರಾಕರಿಸಿರುತ್ತಾರೆ ಎಂದು ಆಯ್ಕೆ ಮಾಡುವುದು. ತಕರಾರು ಎಂದು ಭಾವಿಸಿ 15 ದಿನಗಳ ನೋಟಿಸ್ ಅವಧಿ ಮುಕ್ತಾಯವಾದ ನಂತರ ಸ್ವಯಂಚಾಲಿತವಾಗಿ ಆರ್‌ಸಿಸಿಎಂಎಸ್ ತಂತ್ರಾಂಶಕ್ಕೆ ವರ್ಗಾವಣೆ ಆಗಲಿದೆ. ತಹಸೀಲ್ದಾರರು ಆರ್‌ಸಿಸಿಎಂಎಸ್ ಪ್ರಕರಣದ ವಿಚಾರಣೆ ನಡೆಸಿ, ನಿಯಮಾನುಸಾರ ವಾರಸುದಾರರ ಹೆಸರನ್ನು ಪಹಣಿಯಲ್ಲಿ ಇಂಡೀಕರಿಸಲಾಗುತ್ತದೆ. ಜಂಟಿ ಪಹಣಿ ದಾಖಲಿಸಲು ಒಪ್ಪದೇ ಇದ್ದಲ್ಲಿ ಪಹಣಿ ಕಾಲಂ 11ರಲ್ಲಿ ಉತ್ತರಾಧಿಕಾರಿಗಳ ತಕರಾರು ಇದ್ದು, ಪೌತಿ ಖಾತೆಗೆ ಒಪ್ಪಿಲ್ಲ ಎಂದು ನಮೂದಿಸಲಾಗುತ್ತದೆ.
ಇತರ ಮಾಹಿತಿ
-ಇ-ಪೌತಿ ಖಾತೆ ಮಾಡಲು ಮ್ಯುಟೇಶನ್ ಶುಲ್ಕ 35 ರೂ. ವಿನಾಯಿತಿ ನೀಡಲಾಗಿದೆ.
-ಆಧಾರ್ ಇ-ಕೆವೈಸಿ ಪಡೆದು ಸ್ವಯಂಪ್ರೇರಿತರಾಗಿ ವಿಎಗಳು ಇ-ಪೌತಿ ಮಾಡಬೇಕು
-ಎಲ್ಲ ವಾರಸುದಾರರು ಆಧಾರ್ ಇ-ಕೆವೈಸಿ ನೀಡಿದರೆ 15 ದಿನಗಳ ಒಳಗೆ ಖಾತೆ ವರ್ಗಾವಣೆ
-ಜಂಟಿ ಇದ್ದರೆ ವಿಭಾಗ/ಪಾಲುಪಟ್ಟಿಯ ಮೇರೆಗೆ ಆಸ್ತಿ ವಿಭಾಗದ ಮ್ಯುಟೇಶನ್‌ಗೆ ಅವಕಾಶ
-ಇ-ಪೌತಿ ಖಾತೆಗೆ ಮ್ಯುಟೇಶನ್ ಪೂರ್ವ ನಕ್ಷೆಯು ಪೂರ್ವನಕ್ಷೆಯ ಅಗತ್ಯ ಇರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net