ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Published on
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ಅಂಗೀಕರಿಸಿದ್ದಾರೆ.
ಲೋಕಭವನ ಅಧಿಕೃತ ಆದೇಶ ಹೊರಡಿಸಿದ್ದು, ಹೊಸ ಸರ್ಕಾರ ರಚನೆ ಆಗುವವರೆಗೆ ಹಂಗಾಮಿ ಸಿಎಂಯಾಗಿ ಮುಂದುವರೆಯುವಂತೆ ಸಿದ್ದರಾಮಯ್ಯಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಸರ್ಕಾರ ಅಧಿಸೂಚನೆ ಸಹ ಹೊರಡಿಸಿದೆ.
ರಾಜ್ಯಪಾಲರು ನಗರದಲ್ಲಿ ಇಲ್ಲದ ಕಾರಣ ಅವರ ಅನುಪಸ್ಥಿತಿಯಲ್ಲಿ ಗುರುವಾರ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದ್ದರು. ರಾಜೀನಾಮೆ ಪತ್ರವನ್ನ ಕಾರ್ಯದರ್ಶಿಗಳು ಸ್ವೀಕರಿಸಿದ್ದರೂ, ಸಂವಿಧಾನದ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಬೇಕಿತ್ತು.
ಅಲ್ಲದೆ, ರಾಜ್ಯಪಾಲರಿಗೆ ಖುದ್ದು ಸಿದ್ದರಾಮಯ್ಯ ಅವರೇ ಸಲ್ಲಿಸಬೇಕಿತ್ತು. ಈ ಬಗ್ಗೆ ಲೋಕಭವನದಲ್ಲಿ ಭಿನ್ನ ಅಭಿಪ್ರಾಯಗಳು ಇದ್ದವು. ಗುರುವಾರ (ಮೇ 28) ರಾತ್ರಿ ಇಂದೋರ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ರಾಜ್ಯಪಾಲರಿಗೆ ವಿಶೇಷ ಕಾರ್ಯದರ್ಶಿ ಮಾಹಿತಿ ನೀಡಿದ್ದರು.
ಶುಕ್ರವಾರ ಕಾನೂನು ಸಲಹೆ ಪಡೆದ ರಾಜ್ಯಪಾಲರು ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಅಂಗೀರಿಸಿರುವುದಾಗಿ ಪತ್ರ ಬರೆದರು. ಇದರೊಂದಿಗೆ ರಾಜ್ಯದ ಸಂಪೂರ್ಣ ಸಚಿವ ಸಂಪುಟವನ್ನು ವಿಸರ್ಜಿಸಲಾಗಿದೆ. ರಾಜ್ಯಪಾಲರ ಆದೇಶ ಪ್ರತಿ ವೈರಲ್ ಆಗುತ್ತಿದಂತೆ ಬಹುತೇಕ ಸಚಿವರು ತಮ್ಮ ಸರ್ಕಾರಿ ವಾಹನಗಳನ್ನು ವಿಧಾನಸೌಧಕ್ಕೆ ವಾಪಸ್ ಕಳುಹಿಸಿದರು. ಕಚೇರಿ ಮೇಲೆ ನೇತು ಹಾಕಿದ್ದ ನಾಮಲಕ ತೆಗೆಸಿದರೇ ಸರ್ಕಾರಿ ನಿವಾಸದ ಮೇಲಿನ ಬೋರ್ಡ್‌ಗಳಿಗೆ ಕಾಗದಿಂದ ಮುಚ್ಚಿರುವುದು ಕಂಡುಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net