ಸಿಎಂ ಕುರ್ಚಿ ಗುದ್ದಾಟದ ಮಧ್ಯೆ ಸಿದ್ದು-ಡಿಕೆಶಿ ಬ್ರೇಕ್​ಫಾಸ್ಟ್​ ಮೀಟಿಂಗ್​: ಜಂಟಿ ಸುದ್ದಿಗೋಷ್ಠಿಯತ್ತ ಎಲ್ಲರ ಚಿತ್ತ! Siddaramaiah

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್
Published on
ಬೆಂಗಳೂರು: ರಾಜ್ಯ ರಾಜಕಾರಣ ಇದೀಗ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್​ ಸರ್ಕಾರದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಹಾಲಿ ಸಿಎಂ ಸಿದ್ದರಾಮಯ್ಯ ( Siddaramaiah ) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ( DK Shivakumar )​ ನಡುವೆ ಜಟಾಪಟಿ ನಡೆಯುತ್ತಿದೆ. ಸಿಎಂ ಆಗಿ ಮುಂದುವರಿಯಬೇಕು ಅಂತ ಸಿದ್ದರಾಮಯ್ಯ ಪರ ಅಹಿಂದ ಸಮುದಾಯ ಬ್ಯಾಟ್​ ಬೀಸಿದರೆ, ಡಿಕೆಶಿಗೂ ಒಂದು ಅವಕಾಶ ಕೊಡಿ ಎಂದು ಒಕ್ಕಲಿಗ ಸಮುದಾಯ ಅವರ ಬೆನ್ನಿಗೆ ನಿಂತಿದೆ. ಇದರ ನಡುವೆ ಹೈಕಮಾಂಡ್​ ಸೂಚನೆಯಂತೆ ಸಿದ್ದು ಮತ್ತು ಡಿಕೆಶಿ ಇಂದು ಬ್ರೇಕ್​ಫಾಸ್ಟ್​ ಮೀಟಿಂಗ್​ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ಅವರು ಉಪಾಹಾರ ಸಭೆ ನಡೆಸಿದರು. ಉಭಯ ನಾಯಕರು ಇಡ್ಲಿ ಮತ್ತು ಸಾಂಬಾರ್​ ಸವಿಯುತ್ತಾ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ತಮ್ಮ ಸಭೆಯ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಅವರು ಟ್ವೀಟ್​ ಮಾಡಿಕೊಂಡಿದ್ದಾರೆ.
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಜೊತೆ ಬೆಳಗ್ಗಿನ ಉಪಹಾರ ಸೇವಿಸುತ್ತಾ, ಕೆಲಹೊತ್ತು ಮಾತುಕತೆ ನಡೆಸಿದೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್​ ಮಾಡಿದರೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಇಂದು ಅವರ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಉಪಾಹಾರ ಸಭೆ ನಡೆಸಲಾಯಿತು ಎಂದು ಡಿಸಿಎಂ ಡಿಕೆಶಿ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಅಲ್ಲದೆ, ಕೆಲವೇ ಹೊತ್ತಲ್ಲಿ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದು, ಏನು ಹೇಳಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

'ಕೈ'ಕಮಾಂಡ್ ಲೆಕ್ಕಾಚಾರ ಏನು?

ಇಬ್ಬರ ತೀರ್ಮಾನ ಏನೇ ಆಗಲಿ ಸರ್ಕಾರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಇಬ್ಬರೂ ಸೌಹಾರ್ದಯುತವಾಗಿ ಇರುವುದು ಮುಖ್ಯ. ಈ ಕಾರಣಕ್ಕೆ ದ್ವಿಪಕ್ಷೀಯ ಮಾತುಕತೆ ನಡೆಸಲು ಹೈಕಮಾಂಡ್​ ಸೂಚನೆ ನೀಡಿತ್ತು. ಅದರಂತೆ ಉಭಯ ನಾಯಕರು ಮೀಟಿಂಗ್​ ಮಾಡಿದ್ದಾರೆ. ಈಗ ಎದುರಾಗಿರುವ ಬಿಕ್ಕಟ್ಟು ಸುಗಮ ರೀತಿಯಲ್ಲಿ ಸೌಹಾರ್ದ ವಾತಾವರಣದಲ್ಲಿ ಬಗೆಹರಿಸಲು ಈ ನಾಯಕರಿಬ್ಬರೂ ಸಹಮತದಲ್ಲಿ ಇರುವುದು ಮುಖ್ಯ ಎಂಬುದು ಹೈಕಮಾಂಡ್​ ಲೆಕ್ಕಾಚಾರವಾಗಿದೆ. ಸಿಎಂ-ಡಿಸಿಎಂ ಇಬ್ಬರೇ ಚರ್ಚಿಸಿ ಪರಿಹಾರ ಕಂಡು ಕೊಂಡರೆ ಒಳಿತೆಂಬ ಕಾರಣಕ್ಕೆ ಈ ಸಭೆಯನ್ನು ನಡೆಸಲು ಹೈಕಮಾಂಡ್​ ಸೂಚಿಸಿತು. ದೆಹಲಿಯಲ್ಲಿ ನಡೆಯುವ ಪಕ್ಷದ ಉನ್ನತ 'ನಾಯಕರ ಸಭೆಗೆ ಮುನ್ನ ಇಬ್ಬರ ನಡುವೆ ಒಂದು ಸುತ್ತಿನ ಚರ್ಚೆಯಾದರೆ ನಿರ್ಣಯ ಕೈಗೊಳ್ಳುವಾಗ ಸ್ಪಷ್ಟತೆ ಇರುತ್ತದೆ ಎಂಬ ಕಾರಣ ಸಭೆ ನಡೆಸಲು ತಿಳಿಸಲಾಯಿತು. ಸಿಎಂ-ಡಿಸಿಎಂ ಮುಖ ತಿರುಗಿಸಿಕೊಂಡು ಓಡಾಡಿದರೆ ಪ್ರತಿಪಕ್ಷಕ್ಕೆ ಆಹಾರ, ಕಾಂಗ್ರೆಸ್ ಕಾರ್ಯಕರ್ತರಿಗೂ ಸಂಕಟ ಮತ್ತು ಆಡಳಿತದ ಮೇಲೂ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಹೈಕಮಾಂಡ್​ ಸಭೆ ನಡೆಸಲು ಸೂಚಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net