ಕಮಲಾಪುರ:ಪವಾಡ ಪುರುಷ, ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಆರಾಧ್ಯ ದೈವ ದತ್ತ ದಿಗಂಬರ ಶ್ರೀ ಮಾಣಿಕೇಶ್ವರರ ಜಾತ್ರೋತ್ಸವ ನಿಮಿತ್ತ ಶನಿವಾರ ಬೆಳಗ್ಗೆ ಅಸಂಖ್ಯಾತ ಭಕ್ತರ ಜೈೂಷದ ಮಧ್ಯೆ ಸಂಭ್ರಮದಿಂದ ರಥೋತ್ಸವ ನಡೆಯಿತು.
ಶುಕ್ರವಾರ ಸಂಜೆ ಮಾಣಿಕೇಶ್ವರರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ವಾದ್ಯಗಳೊಂದಿಗೆ ಗ್ರಾಮದೆಲ್ಲೆಡೆ ಪಲ್ಲಕ್ಕಿ ಸಂಚರಿಸಿತು. ಪ್ರತಿಯೊಬ್ಬರೂ ಪಲ್ಲಕ್ಕಿಗೆ ಕಾಯಿ&ಕರ್ಪೂರ ಸಮರ್ಪಿಸಿ ದರ್ಶನ ಪಡೆದರು. ಶನಿವಾರ ನಸುಕಿನ ಜಾವ ಮಾಣಿಕೇಶ್ವರ ದೇವಸ್ಥಾನ ತಲುಪಿತು. ದೇಗುಲದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ನೆರವೇರಿಸಲಾಯಿತು.
ಬಳಿಕ ಮಹಾರಥವನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಯಿತು. ಶ್ರೀ ಶರಣ ಶಂಕರಲಿಂಗ ಮಹಾರಾಜರ ಸಾನ್ನಿಧ್ಯದಲ್ಲಿ ಅದ್ದೂರಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರಿಂದ ಶ್ರೀ ಮಾಣಿಕೇಶ್ವರ ಮಹಾರಾಜ್ಕಿ ಜೈ.. ಜೈ ಮಾಣಿಕೇಶ್ವರ... ಶ್ರೀ ಶರಣ ಶಂಕರಲಿಂಗ ಮಹಾರಾಜ್ಕಿ ಜೈ.. ಸೇರಿ ಹಲವು ೂಷಣೆಗಳು ಮೊಳಗಿದವು. ಜನರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ನಾಣ್ಯ ಎಸೆದು ಭಕ್ತಿ ಸಮರ್ಪಿಸಿದರು.
ಶ್ರೀ ಶಾಂತಲಿಂಗ ದೇವರು, ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಜಿಪಂ ಮಾಜಿ ಸದಸ್ಯ ಶಿವಶೆಟ್ಟಿ ಪಾಟೀಲ್, ಎಪಿಎಂಸಿ ಮಾಜಿ ಉಪಾಧ್ಯ ರಾಜಕುಮಾರ ಕೋಟೆ, ಪ್ರಮುಖರಾದ ಗೀತಾ ಪಾಟೀಲ್, ಪ್ರಕಾಶ ರೆಡ್ಡಿ, ವೀರೇಶ ಕೋಟಿ, ರವೀಂದ್ರನಾಥ ರೆಡ್ಡಿ, ಚಂದ್ರಕಾಂತ ಡೋಣಿ ಇತರರಿದ್ದರು.