ಔರಾದ್: ಸಮತೋಲಿತ ರಸಗೊಬ್ಬರ ಬಳಕೆ, ಸಾವಯವ ಕೃಷಿಯ ಅಗತ್ಯತೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡುವ ಮೂಲಕ ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂದು ಬೀದರ್ನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ರಾಜಶೇಖರ ಬಸನಾಯಕ್ ಹೇಳಿದರು.
ನಾಗುರ(ಎನ್)ದಲ್ಲಿ ಐಸಿಎಆರ್ ಕೃಷಿ ವಿಾನ ಕೇಂದ್ರ ಬೀದರ್ ಮತ್ತು ನಾಫೆಡ್ ಬೆಂಗಳೂರು ಹಾಗೂ ನಾಗೂರ ಭೂಮಿ ಎಫ್ಪಿಒ ಸಹಯೋಗದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಖೇತಿ ಬಚಾವೋ ಅಭಿಯಾನ ಹಾಗೂ ಸಮತೋಲಿತ ರಸಗೊಬ್ಬರ ಬಳಕೆ ಕಾರ್ಯಕ್ರಮದಡಿ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಪ್ರತಿವರ್ಷ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಸಾವಯವ ಕೃಷಿ ಕಡೆ ಒಲವು ತೋರಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಗ್ರಾಮಗಳನ್ನು ಸಾವಯವ ಕೃಷಿ ಗ್ರಾಮವನ್ನಾಗಿ ರೂಪಿಸಿಕೊಳ್ಳುವ ಸಂಕಲ್ಪ ಮಾಡಬೇಕು. ಖಾಸಗಿ ಗೊಬ್ಬರಗಳಿಗೆ ಮಾರು ಹೋಗದೆ ರೈತರು ಸಾವಯವ ಕೃಷಿ ಕಡೆಗೆ ಆಸಕ್ತಿ ತೋರಬೇಕು. ಸಿರಿ ಧಾನ್ಯಗಳು ಮತ್ತು ಅಳಿವಿ ನಂಚಿನಲ್ಲಿರುವ ಧಾನ್ಯಗಳನ್ನು ಬೆಳೆಸಬೇಕು ಮತ್ತು ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯ ಮಾಡಿಸಿಕೊಡಬೇಕು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ನಾಫೆಡ್ನ ಅಧಿಕಾರಿ ಪ್ರಶಾಂತ ನಾಫೆಡ್ನ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ,ಗ್ರಾಮದಲ್ಲಿ ಬೀಜ ಸಂಗ್ರಹ ಕೇಂದ್ರವನ್ನು ಉದ್ಘಾಟಿಸಿದರು. ಗಣಪತಿ ಸಿಂಗಟೆ, ಸಂಗಮೇಶ ಕೊಡಗೆ, ಶಿವಕಾಂತ ಮಡಿವಾಳ, ಓಂಕಾರ ಹಾವಶೆಟ್ಟೆ ಪರಮೇಶ ವಂಗದಾಳೆ ಹಾಗೂ ರೈತರು ಇದ್ದರು.