ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಶಾಸಕರ ಆಪ್ತ ಸಹಾಯಕ | Shirahatti MLA

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಶಾಸಕರ ಆಪ್ತ ಸಹಾಯಕ
ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಶಾಸಕರ ಆಪ್ತ ಸಹಾಯಕ
Published on
ಗದಗ: ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ(Shirahatti MLA) ಕ್ಷೇತ್ರದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ರೋಚಕ ಮತ್ತು ಮುಜುಗರದ ಘಟನೆಯೊಂದು ಇಂದು ನಡೆದಿದೆ. ಲಂಚ ಸ್ವೀಕರಿಸುತ್ತಿದ್ದ ವೇಳೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕರನ್ನು ಲೋಕಾಯುಕ್ತ ಪೊಲೀಸರು ರೆಡ್‌ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಘಟನೆಯ ಹಿನ್ನೆಲೆ: 1 ಕೋಟಿ ರೂ. ಕಾಮಗಾರಿಗೆ ಕಮಿಷನ್ ದಂಧೆ

ಲಕ್ಷ್ಮೇಶ್ವರ ತಾಲೂಕಿನ ಸಂಕದಾಳ ಗ್ರಾಮದಲ್ಲಿ ಒಂದು ಕೋಟಿ ರೂಪಾಯಿ ಮೊತ್ತದ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ನೀಡಲು ಶಾಸಕ ಡಾ. ಚಂದ್ರು ಲಮಾಣಿ ಅವರು ಗುತ್ತಿಗೆದಾರ ವಿಜಯ ಪೂಜಾರ ಎಂಬುವವರಿಂದ ಬರೋಬ್ಬರಿ 11 ಲಕ್ಷ ರೂಪಾಯಿ ಲಂಚದ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಮುಂಗಡವಾಗಿ ಇಂದು 5 ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಶಾಸಕರು ಸೂಚಿಸಿದ್ದರು.

ಬಾಲಾಜಿ ಆಸ್ಪತ್ರೆಯಲ್ಲಿ ಲೋಕಾ ಟ್ರ್ಯಾಪ್..!

ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಶಾಸಕರ ಒಡೆತನದ ಬಾಲಾಜಿ ಆಸ್ಪತ್ರೆಯಲ್ಲೇ ಹಣದ ವಹಿವಾಟು ನಡೆಸಲು ತೀರ್ಮಾನಿಸಲಾಗಿತ್ತು. ಗುತ್ತಿಗೆದಾರ ವಿಜಯ ಪೂಜಾರ ಅವರು ಶಾಸಕರ ಸಮ್ಮುಖದಲ್ಲೇ ಅವರ ಆಪ್ತ ಸಹಾಯಕ ಮಂಜು ವಾಲ್ಮೀಕಿಗೆ 5 ಲಕ್ಷ ರೂಪಾಯಿ ನಗದನ್ನು ನೀಡುತ್ತಿದ್ದರು. ಆಗ ಮೊದಲೇ ಹೊಂಚು ಹಾಕಿ ಕುಳಿತಿದ್ದ ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿತು.

ನೋಟಿನ ಕಂತೆ ಎಸೆದು ಪರಾರಿಯಾಗಲು ಯತ್ನಿಸಿದ ಪಿಎ..!

ಲೋಕಾಯುಕ್ತ ಪೊಲೀಸರನ್ನು ಕಂಡ ತಕ್ಷಣ ಗಾಬರಿಗೊಂಡ ಆಪ್ತ ಸಹಾಯಕ ಮಂಜು ವಾಲ್ಮೀಕಿ, ತನ್ನ ಬಳಿಯಿದ್ದ ಹಣದ ಕಂತೆಯನ್ನು ಆಸ್ಪತ್ರೆಯ ಹಿಂಭಾಗದ ಕಸದ ರಾಶಿಗೆ ಎಸೆದು ಸ್ಥಳದಿಂದ ಓಡಿಹೋಗಲು ಯತ್ನಿಸಿದನು. ಆದರೆ, ಚುರುಕಾದ ಲೋಕಾಯುಕ್ತ ಸಿಬ್ಬಂದಿ ಆತನನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಎಸೆಯಲ್ಪಟ್ಟ 5 ಲಕ್ಷ ರೂಪಾಯಿ ನಗದನ್ನು ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.

ಶಾಸಕ ಮತ್ತು ಇಬ್ಬರು ಪಿಎಗಳ ಬಂಧನ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಡಾ. ಚಂದ್ರು ಲಮಾಣಿ, ಪಿಎಗಳಾದ ಮಂಜು ವಾಲ್ಮೀಕಿ ಮತ್ತು ಗುರು ಎಂಬುವವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಸಕರ ಆಸ್ಪತ್ರೆ ಮತ್ತು ನಿವಾಸದ ಮೇಲೆ ದಾಳಿ ಮುಂದುವರಿದಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದ ಬಿಜೆಪಿಗೆ ಈಗ ಸ್ವಂತ ಶಾಸಕನೇ ಸಿಕ್ಕಿಬಿದ್ದಿರುವುದು ದೊಡ್ಡ ಮುಖಭಂಗ ತಂದಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net