ಶಹಾಬಾದ್ ತಾಲೂಕಿನ ಬಾಲು ನಾಯಕ ತಾಂಡಾದ ಮಾತಾ ಶಕುಂತಲಾ ದೇವಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಗುಳನಾಗಾವಿ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಆಶೀರ್ವಚನ ನೀಡಿದರು. ಜೇಮಸಿಂಗ್ ಮಹಾರಾಜ, ಅನೀಲ ಮಹಾರಾಜ ಇದ್ದರು. ......
ಶಹಾಬಾದ್: ಕುಮಾರಿ ಮುತೈದೆಯಾಗಿ ಸಣ್ಣ ವಯಸ್ಸಿನಲ್ಲೇ ದೈವಿಶಕ್ತಿ ಪಡೆದು ಭಕ್ತರ ಪಾಲಿಗೆ ದೇವಿಯಾಗಿದ್ದ ಶಕುಂತಲಾ ಮಾತೆ ಅನೇಕ ಪವಾಡ ಮಾಡಿ ದೇವಿ ಪಾದ ಸೇರಿದ್ದು, ಅವರ ಹೆಸರಿನಲ್ಲಿ ನಿರ್ಮಿಸಿದ ದೇವಸ್ಥಾನ ಭಕ್ತಿ ಮತ್ತು ಶ್ರದ್ಧೆಯ ಕೇಂದ್ರವಾಗಿದೆ ಎಂದು ಮುಗುಳನಾಗಾವಿ ಕಟ್ಟಿಮನಿ ಹಿರೇಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಹೇಳಿದರು.
ಮುಗುಳನಾಗಾವಿಯ ಬಾಲು ನಾಯಕ ತಾಂಡಾದಲ್ಲಿ ಸೋಮವಾರ ಏರ್ಪಡಿಸಿದ್ದ ಮಾತಾ ಶಕುಂತಲಾ ದೇವಿ ದೇವಸ್ಥಾನ ಉದ್ಘಾಟನೆ, ನಂದಿಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಚಿಕ್ಕ ವಯಸ್ಸಲ್ಲೇ ದೇವಿ ಜಗದಂಬೆ ಆರಾಧಕಳಾಗಿ ಕಷ್ಟ ಎಂದು ಬಂದ ಭಕ್ತರಿಗೆ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಪೂಜ್ಯ ಯಲ್ಲಾಲಿಂಗ ಪುಣ್ಯಾಶ್ರಮದ ಶ್ರೀ ಜೇಮಸಿಂಗ್ ಮಹಾರಾಜ ಆಶೀರ್ವಚನ ನೀಡಿ, ಚಿಕ್ಕ ಮಕ್ಕಳು ಹೊರಗಿನವರಿಗಿಂತ ಮನೆಯವರನ್ನು ನೋಡಿ ಅನುಕರಣೆ ಮಾಡುತ್ತಾರೆ. ಮನೆಯ ಹಿರಿಯರು ಗುರು&ಹಿರಿಯರನ್ನು ಗೌರವದಿಂದ ಕಂಡಾಗ ಮಾತ್ರ ಮಕ್ಕಳು ಅದನ್ನು ರೂಢಿಸಿಕೊಳ್ಳುತ್ತಾರೆ, ಮಕ್ಕಳಿಗೆ ಕೇವಲ ಶಿಕ್ಷಣ ಕೊಟ್ಟರೆ ಸಾಲದು, ಅದರೊಂದಿಗೆ ವಿನಯವನ್ನೂ ಕಲಿಸಬೇಕು. ಅಂದಾಗಲೇ ಸಂಸ್ಕಾರಯುತ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.