ಹಸಿರು ಇಂಧನಕ್ಕೆ ‘ಸ್ವಯಂ ಭೂ ಪರಿವರ್ತನೆ’ಎನರ್ಜಿ

ಪವನ ಶಕ್ತಿ
ಪವನ ಶಕ್ತಿ
Published on
ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಕಂದಾಯ ಇಲಾಖೆ ಸ್ವಯಂಚಾಲಿತ ಭೂ ಪರಿವರ್ತನೆ ಸೇವೆ ಪರಿಚಯಿಸಿದ ನಂತರ, ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಉತ್ತೇಜನ ಲಭಿಸಿದೆ. ಒಂದೂವರೆ ತಿಂಗಳಲ್ಲಿ 1893 ಅರ್ಜಿಗಳನ್ನು ವಿಲೇವಾರಿ ಮಾಡಿ 4,427 ಎಕರೆ ಜಮೀನನ್ನು ಸ್ವಯಂಚಾಲಿತ ಭೂ ಪರಿವರ್ತನೆ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೂ ಭೂ ಪರಿವರ್ತನಾ ಶುಲ್ಕದ ರೂಪದಲ್ಲಿ 15 ಕೋಟಿ ರೂ.ಗೂ ಹೆಚ್ಚು ಆದಾಯ ಬಂದಿದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂ ಪರಿವರ್ತನೆಗೊಂಡ ಭೂಮಿ ವಿಸ್ತೀರ್ಣದಲ್ಲಿ (692 ಎಕರೆ) ತುಮಕೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಇನ್ನು ಗ್ರೀನ್ ಎನರ್ಜಿ ಮತ್ತು ಸ್ವಯಂಚಾಲಿತ ಭೂ ಪರಿವರ್ತನೆ ಸೌಲಭ್ಯ ಪಡೆಯುವಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳು ಅಗ್ರಸ್ಥಾನ ಪಡೆದಿವೆ. ಗದಗ ಮತ್ತು ಬೀದರ್ ಸ್ವಯಂಚಾಲಿತ ಭೂ ಪರಿವರ್ತಿತ ಭೂಮಿಯ ಅಂದಾಜು ಶೇ.25 (1,100 ಎಕರೆ) ಕ್ಕೂ ಹೆಚ್ಚು ವ್ಯಾಪ್ತಿ ಹೊಂದಿವೆ.
ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ನವೀಕರಿಸಬಹುದಾದ ಇಂಧನ ಸ್ಥಾವರಗಳನ್ನು ಸ್ಥಾಪಿಸಲು ಭೂ ಬಳಕೆಯ ಪರಿವರ್ತನೆಯು ಕಾಗದರಹಿತ ಮತ್ತು ಮುಖರಹಿತವಾಗಿದೆ. ಇದು ಹೂಡಿಕೆದಾರರಿಗೆ ಸಮಯ ಉಳಿಸಲು ಮತ್ತು ಮೊದಲಿಗಿಂತ ವೇಗವಾಗಿ ಸ್ಥಾವರಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಭೂ ಪರಿವರ್ತನೆಯಲ್ಲಿ ವಿಳಂಬದ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಕೈಗಾರಿಕೋದ್ಯಮಿಗಳು ನೆರೆಯ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದರು. ಈ ಹೊಸ ಯೋಜನೆ ಸರಳೀಕರಣದೊಂದಿಗೆ, ಕರ್ನಾಟಕವು ಈಗ ಹೂಡಿಕೆದಾರರಿಗೆ ಹೆಚ್ಚು ಆಕರ್ಷಕವಾಗಿದೆ. ಸ್ವಯಂ-ಪರಿವರ್ತನೆ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಮತ್ತು ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳು ಈ ಮಾದರಿಯನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಿಸುತ್ತಿವೆ ಎಂದು ಕಟಾರಿಯಾ ತಿಳಿಸಿದ್ದಾರೆ.
ಜನವರಿ 27ರಂದು ನವೀಕರಿಸಬಹುದಾದ ಇಂಧನ ಸ್ಥಾವರಗಳಿಗೆ ಸ್ವಯಂ ಪರಿವರ್ತನೆಯನ್ನು ಪರಿಚಯಿಸಲಾಗಿದೆ. ಏಪ್ರಿಲ್ 2ರವರೆಗೆ ಕಂದಾಯ ಇಲಾಖೆಯು 4,427 ಎಕರೆ ಒಳಗೊಂಡಂತೆ ಸ್ವಯಂ ಪರಿವರ್ತನೆಗಾಗಿ 1,893 ಅರ್ಜಿಗಳನ್ನು ಸ್ವೀಕರಿಸಿದೆ ಮತ್ತು ಪರಿವರ್ತನೆ ಮಾಡಲಾಗಿದೆ. ಕಂದಾಯ ಇಲಾಖೆಯ ದತ್ತಾಂಶದ ಪ್ರಕಾರ ಗದಗ ಜಿಲ್ಲೆಯಲ್ಲಿ 686 ಎಕರೆ, ಕೊಪ್ಪಳದಲ್ಲಿ 342 ಎಕರೆ ಪರಿವರ್ತನೆ ಆಗಿರುವುದು ಕಂಡುಬಂದಿದೆ. ಬೀದರ್‌ನಲ್ಲಿ 441 ಎಕರೆ, ಕಲಬುರಗಿಯಲ್ಲಿ 244 ಎಕರೆ, ರಾಯಚೂರಿನಲ್ಲಿ 221 ಮತ್ತು ವಿಜಯನಗರ ಜಿಲ್ಲೆಯಲ್ಲಿ 333 ಎಕರೆಯನ್ನು ಗ್ರೀನ್ ಎನರ್ಜಿಗೆ ಭೂ ಪರಿವರ್ತನೆ ಮಾಡಿಕೊಡಲಾಗಿದೆ.
ಮಾಸ್ಟರ್‌ಪ್ಲ್ಯಾನ್ ಹೊರಗಿನ ಪ್ರದೇಶದಲ್ಲೂ ಸಂಚಲನ
ಭೂ ಪರಿವರ್ತನೆಯನ್ನು ಸರಳೀಕರಣ ಮಾಡುವ ಸಲುವಾಗಿ ಮಾ.31ರಿಂದ ಮಾಸ್ಟರ್‌ಪ್ಲ್ಯಾನ್ ಹೊರಗಿನ ಪ್ರದೇಶಗಳಿಗೆ ಮಾಡ್ಯೂಲ್ ಅನ್ನು ಪ್ರಾರಂಭಿಸಿತು. 630 ಅರ್ಜಿಗಳಿಗೆ ಜಿಲ್ಲಾಧಿಕಾರಿಗಳ ಅನುಮೋದನೆ ಮತ್ತು ಸರ್ಕಾರಕ್ಕೆ ಶುಲ್ಕ ಪಾವತಿ ಮಾಡಲಾಗಿದ್ದು, ಅಂತಿಮ ಆದೇಶಕ್ಕಾಗಿ ಬಾಕಿ ಉಳಿದಿವೆ. ಸ್ವಯಂ-ಪರಿವರ್ತನೆ ಈಗ ಜಾರಿಯಲ್ಲಿರುವ ಕಾರಣ ಶೀಘ್ರದಲ್ಲೇ ವಿಲೇವಾರಿ ಆಗಲಿವೆ. ಇನ್ನು 2,795 ಅರ್ಜಿಗಳು 30 ದಿನಗಳ ಮಿತಿ ದಾಟಿವೆ. ಆದ್ದರಿಂದ ಈ ಪೈಕಿ 1,736 ಪ್ರಕರಣಗಳನ್ನು ಶುಲ್ಕ ಪಾವತಿಗೆ ಸ್ವಯಂಚಾಲಿತವಾಗಿ ಕಳುಹಿಸಲಾಗಿದೆ. ಐದು ದಿನಗಳಲ್ಲಿ ಡಿಸಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಬಾಕಿ 1,059 ಪ್ರಕರಣಗಳು ಸ್ವಯಂಚಾಲಿತವಾಗಿ ಶುಲ್ಕ ಪಾವತಿಗೆ ಹೋಗಲಿವೆ. ಆ ನಂತರ ಹೊಸಪದ್ಧತಿಯಂತೆ ಸ್ವಯಂಚಾಲಿತ ಭೂ ಪರಿವರ್ತನೆ ಆಗಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net