ದ್ವಿತೀಯ ಪಿಯು ಮೌಲ್ಯಮಾಪನ ಬಹಿಷ್ಕಾರ: ಉಪನ್ಯಾಸಕರ ಸಂಘದಲ್ಲಿಯೇ ಬಂತು ಅಪಸ್ವರ

ದ್ವಿತೀಯ ಪಿಯು ಮೌಲ್ಯಮಾಪನ
ದ್ವಿತೀಯ ಪಿಯು ಮೌಲ್ಯಮಾಪನ
Published on

ಪ್ರಮುಖ ಮುಖ್ಯಾಂಶಗಳು

  • ಮೌಲ್ಯಮಾಪನ ಬಹಿಷ್ಕಾರದ ಆಲೋಚನೆ ಬಿಟ್ಟು ಸರ್ಕಾರ ನಿಗದಿಪಡಿಸುವ ವೇಳಾಪಟ್ಟಿಯಂತೆ ಮೌಲ್ಯಮಾಪನ
  • ಸಂಘದ ಎಲ್ಲಾ ಜಿಲ್ಲಾ ಪದಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಒಕ್ಕೊರಲ ತೀರ್ಮಾನ
  • ಅನಗತ್ಯವಾಗಿ ಮೌಲ್ಯಮಾಪನ ಬಹಿಷ್ಕಾರದ ಕರೆ ನೀಡಿ ದಾರಿತಪ್ಪಿಸುತ್ತಿದ್ದಾರೆ ಎಂಬ ಆರೋಪ ಉಪನ್ಯಾಸಕರ ವಲಯದಲ್ಲೇ ಕೇಳಿ ಬರುತ್ತಿದೆ.
ಬೆಂಗಳೂರು: ಪದವಿ ಪೂರ್ವ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕಚೇರಿಯ ಆಡಳಿತದ ಮೇಲ್ವಿಚಾರಣೆಯನ್ನು ಜಿಪಂ ಸಿಇಒಗಳಿಗೆ ವಹಿಸಿರುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಶಿಕ್ಷಣ ಸಚಿವರು ತಿಳಿಸಿರುವುದರಿಂದ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ಆಲೋಚನೆ ಕೈಬಿಟ್ಟಿರುವುದಾಗಿ ಪಿಯು ಕಾಲೇಜು ಉಪನ್ಯಾಸಕರ ಸಂಘ ತಿಳಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ, ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಸದನದಲ್ಲಿ ಡಿಡಿಪಿಯುಗಳ ಕಚೇರಿಯ ಆಡಳಿತ ಮೇಲ್ವಿಚಾರಣೆಯನ್ನು ಜಿಪಂ ಸಿಇಒಗಳಿಗೆ ವಹಿಸುವ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ಉಪನ್ಯಾಸಕರಲ್ಲಿದ್ದ ಗೊಂದಲ ಬಗೆಹರಿದಿದ್ದು, ಇಲಾಖೆಯ ಸ್ವಾಯತ್ತತೆ ಉಳಿವಿಗೆ ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ನಾವು ಮೌಲ್ಯಮಾಪನ ಬಹಿಷ್ಕಾರದ ಆಲೋಚನೆ ಬಿಟ್ಟು ಸರ್ಕಾರ ನಿಗದಿಪಡಿಸುವ ವೇಳಾಪಟ್ಟಿಯಂತೆ ಮೌಲ್ಯಮಾಪನ ಕೇಂದ್ರಗಳಿಗೆ ಹಾಜರಾಗಿ ಮೌಲ್ಯಮಾಪನ ಕಾರ್ಯ ನಡೆಸಲು ಸಂಘದ ಎಲ್ಲಾ ಜಿಲ್ಲಾ ಪದಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಒಕ್ಕೊರಲ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಸಂಘದಿಂದ ಉಪನ್ಯಾಸಕರ ದಾರಿ ತಪ್ಪಿಸುವ ಯತ್ನ: ಆರೋಪ

ಈ ಮಧ್ಯೆ, ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಯಾವುದೇ ಚರ್ಚೆ ನಡೆಸದೆ ಅನಗತ್ಯವಾಗಿ ಮೌಲ್ಯಮಾಪನ ಬಹಿಷ್ಕಾರದ ಕರೆ ನೀಡಿ ದಾರಿತಪ್ಪಿಸುತ್ತಿದ್ದಾರೆ ಎಂಬ ಆರೋಪ ಉಪನ್ಯಾಸಕರ ವಲಯದಲ್ಲೇ ಕೇಳಿ ಬರುತ್ತಿದೆ.
ಶಿಕ್ಷಣ ಸಚಿವರು ಡಿಡಿಪಿಯು ಕಚೇರಿ ಆಡಳಿತ ಮೊಟಕು ಪ್ರಸ್ತಾವನೆ ಇಲ್ಲ ಎಂದು ಈ ಹಿಂದೆಯೇ ಶಾಸಕರ ಸಭೆಯಲ್ಲಿ ಸ್ಪಷ್ಟಪಡಿಸಿದ್ದರು. ಆದರೂ, ಅನಗತ್ಯವಾಗಿ ಉಪನ್ಯಾಸಕರ ಸಂಘ ಅಧ್ಯಕ್ಷ ನಿಂಗೇಗೌಡ ಹಾಗೂ ಇತರೆ ಪದಾಧಿಕಾರಿಗಳು ಮತ್ತೆ ಈ ವಿಷಯ ಪ್ರಸ್ತಾಪಿಸಿ ಅಗ್ಗದ ಪ್ರಚಾರ ಪಡೆಯುತ್ತಿದ್ದಾರೆ. ಇದರ ಬದಲು 200ಕ್ಕೂ ಹೆಚ್ಚು ಉಪನ್ಯಾಸಕರು ಎದುರಿಸುತ್ತಿರುವ ಕಾರ್ಯಭಾರ ಕೊರತೆ, ಇನ್ನಿತರೆ ಸಮಸ್ಯೆಗಳ ಬಗ್ಗೆ ಗಮನ ಕೊಡಲಿ. ಸ್ವತಃ ನಿಂಗೇಗೌಡ ಅವರೂ ಕಾರ್ಯಭಾರವೇ ಇಲ್ಲದ ಬೆಂಗಳೂರಿನ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದೆಡೆ ಸಂಘದ ಅಧಿಕಾರ ಅವಧಿ ಮುಗಿದು ಎರಡು ವರ್ಷ ಕಳೆದರೂ ಚುನಾವಣೆ ನಡೆಸದೆ ಕೆಲ ನಿವೃತ್ತರ ಜತೆ ಹಂಗಾಮಿಯಾಗಿ ಮುಂದುವರೆಯುವ ಮೊದಲು ಸಂಘಕ್ಕೆ ಚುನಾವಣೆ ನಡೆಸಲು ಕ್ರಮ ವಹಿಸಲಿ ಎಂದು ಸಂಘದ ರಾಮನಗರ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net