ಸೆಟ್‌ಲೈಟ್ ಟೌನ್, ರಿಂಗ್ ರೋಡ್ ಶೀಘ್ರ ಶುರು

ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ವೇದನಾದ ಗುರುಕುಲದ ನೂತನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಂಸದ ಡಾ.ಸಿ.ಎನ್.ಮಂಜುನಾಥ್, ಜಿಲ್ಲಾಧಿಕಾರಿ ಯಶವಂತ್.ವಿ.ಗುರುಕರ್, ಉಪವಿಭಾಗಾಧಿಕಾರಿ ಬಿನೋಯ್, ತಹಸೀಲ್ದಾರ್ ತೇಜಸ್ವಿನಿ, ಗುರುಕುಲದ ಗುರುಗಳು ಗಣಪಾಠಿ, ರವಿ, ಡಾ.ತೇಜಸ್ವಿನಿಗೌಡ, ಸುಜಾತಾ ರವಿ ಹಾಗೂ ಇತರರಿದ್ದರು.
ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ವೇದನಾದ ಗುರುಕುಲದ ನೂತನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಂಸದ ಡಾ.ಸಿ.ಎನ್.ಮಂಜುನಾಥ್, ಜಿಲ್ಲಾಧಿಕಾರಿ ಯಶವಂತ್.ವಿ.ಗುರುಕರ್, ಉಪವಿಭಾಗಾಧಿಕಾರಿ ಬಿನೋಯ್, ತಹಸೀಲ್ದಾರ್ ತೇಜಸ್ವಿನಿ, ಗುರುಕುಲದ ಗುರುಗಳು ಗಣಪಾಠಿ, ರವಿ, ಡಾ.ತೇಜಸ್ವಿನಿಗೌಡ, ಸುಜಾತಾ ರವಿ ಹಾಗೂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೆಟ್‌ಲೈಟ್ ಟೌನ್, ರಿಂಗ್ ರೋಡ್ ಶೀಘ್ರ ಶುರು
ಕೈಲಾಂಚ: ಸೆಟ್‌ಲೈಟ್ ಟೌನ್, ರಿಂಗ್ ರೋಡ್ (ಎಸ್‌ಟಿಆರ್‌ಆರ್) ಯೋಜನೆಗೆ ಭೂ ಸ್ವಾಧೀನವಾಗುತ್ತಿದ್ದಂತೆ ಪರಿಹಾರ ಪಾವತಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ರಾಮನಗರ ತಾಲೂಕು ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವೇದನಾದ ಗುರುಕುಲದ ನೂತನ ಕಟ್ಟಡ ‘ವೇದ ವಿದ್ಯಾವಿಹಾರ’ದ ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಕ್ಕಿರುವ ಎಸ್‌ಟಿಆರ್‌ಆರ್ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ತಡವಾಗಿದ್ದರಿಂದ ರೈತರು, ಯೋಜನೆಯೇ ನಿಂತು ಹೋಗಿದೆ ಎಂದು ಆತಂಕಗೊಂಡಿದ್ದಾರೆ. ಭೂ ಸ್ವಾಧೀನಕ್ಕೆ ಗುರುತಿಸಿರುವ ಭೂಮಿಯನ್ನು ಇನ್ನೂ ಸ್ವಾಧೀನ ಪಡಿಸಿಕೊಂಡಿಲ್ಲ. ಇಂದಿಗೂ ಆ ಜಾಗದಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಪರಿಹಾರ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಮುಖಂಡರಾದ ಗೌತಮ್‌ಗೌಡ, ದೊರೆಸ್ವಾಮಿ, ಭರತ್‌ರಾಜ್, ಜಯರಾಮ್, ಹೇಮಂತ್, ರವಿಕುಮಾರ್, ವಿಷಕಂಠಯ್ಯ, ಶಿವರುದ್ರಯ್ಯ, ಚಂದ್ರಗಿರಿ, ನವೀನ್, ಚಂದ್ರಣ್ಣ, ಶಿವಣ್ಣ, ಉಪ ತಹಸೀಲ್ದಾರ್ ರುದ್ರಮ್ಮ, ಪಿಡಿಒ ಗೋಮತಿ, ಕಾರ್ಯದರ್ಶಿ ಜಯರಾಮಯ್ಯ ಹಾಗೂ ಇತರರಿದ್ದರು.
ರಾಜಧಾನಿಯಾಚೆಯೂ ವೇದೋಪದೇಶ: ಬೆಂಗಳೂರಿನಲ್ಲಿ ವೇದನಾದ ಗುರುಕುಲದ ಗೋವಿಂದ ಪ್ರಕಾಶ ಭಟ್ ಅವರು, ರಾಜಧಾನಿಯಾಚೆ ವೇದೋಪದೇಶ ನೀಡುವ ಉದ್ದೇಶದಿಂದ ಬನ್ನಿಕುಪ್ಪೆ ಗ್ರಾಮದಲ್ಲಿ ಗುರುಕುಲ ನಿರ್ಮಾಣದ ಭೂಮಿಪೂಜೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಹ್ವಾನಿಸಿದ್ದರು. ಸಂಸದ ಡಾ.ಸಿ.ಎನ್.ಮಂಜುನಾಥ್, ಪತ್ನಿ ಅನಸೂಯ ಮಂಜುನಾಥ್ ಸೇರಿ ಹಲವು ಗಣ್ಯರು ಸಹ ಕಾರ್ಯಕ್ರಮದಲ್ಲಿ ಸಚಿವರೊಂದಿಗೆ ಪಾಲ್ಗೊಂಡಿದ್ದರು.
ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ವೇದಜ್ಞಾನವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಉದ್ದೇಶದಿಂದ ಆರಂಭಿಸಲಾದ ಗುರುಕುಲವು ಜ್ಞಾನ, ಸಂಸ್ಕಾರಗಳ ಪೀಠವಾಗಲಿ. ಗುರುಕುಲ ಮತ್ತಷ್ಟು ಅಭಿವೃದ್ಧಿಯಾಗಿ ವಿಶ್ವಕ್ಕೆ ಜ್ಞಾನಾರ್ಜನೆ ಬೆಳಕು ನೀಡಲಿ ಎಂದು ಆಶಿಸಿದರು.
ಬನ್ನಿಕುಪ್ಪೆ ಗುರುಕುಲದ ರವಿ ಮಾತಮಾಡಿ, ಗುರುಕುಲದ ವೇದ ಪಾಠಶಾಲೆಯಲ್ಲಿ 8ರಿಂದ 9 ವರ್ಷದ ಮಕ್ಕಳಿಗೆ ಪ್ರವೇಶ ನೀಡಲಿದ್ದು, ಇವರು ಮುಂದೆ 12ರಿಂದ 13 ವರ್ಷ ಗುರುಕುಲದಲ್ಲಿ ವೇದಾಭ್ಯಾಸ ಮಾಡಲಿದ್ದಾರೆ. ಸುತ್ತಲೂ ಹಸಿರಿನಿಂದ ಕೂಡಿದ ಸುಂದರ ಪರಿಸರದಲ್ಲಿ ಸುಸಜ್ಜಿತ ಗುರುಕುಲ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ವೃದ್ಧಾಶ್ರಮ ಸ್ಥಾಪಿಸಲು ಚಿಂತಿಸಲಾಗಿದೆ ಎಂದರು.
ಮಾರುಕಟ್ಟೆ ದರದಲ್ಲಿ ಪರಿಹಾರಕ್ಕೆ ಒತ್ತಾಯ: ಭೂಮಿಪೂಜೆ ಬಳಿಕ ಯೋಜನಾ ಪ್ರದೇಶದ ಕೆಲ ರೈತರು ಸಚಿವರನ್ನು ಭೇಟಿಯಾಗಿ ಯೋಜನೆ ಕುರಿತು ಸ್ಪಷ್ಟಪಡಿಸುವ ಜತೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಪ್ರಸಕ್ತ ಮಾರುಕಟ್ಟೆ ದರದಲ್ಲಿ ಪರಿಹಾರ ಪಾವತಿಸುವಂತೆ ಒತ್ತಾಯಿಸಿದರು. ಈ ವೇಳೆ ಸಂಸದ ಡಾ.ಸಿ.ಎನ್.ಮಂಜುನಾಥ್ ಮತ್ತು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಂದ ಯೋಜನೆಯ ಮಾಹಿತಿ ಪಡೆದ ಸಚಿವರು, ರೈತರಿಗೆ ನ್ಯಾಯಯುತವಾಗಿ ಪರಿಹಾರ ದೊರಕಿಸುವ ಭರವಸೆ ನೀಡಿದರು.
ವೇದ ಶಿಕ್ಷಣ ನೀಡುವ ಗುರುಕುಲವನ್ನು ಗ್ರಾಮೀಣ ಭಾಗದ ಹೊರವಲಯದಲ್ಲಿ ನಿರ್ಮಿಸಲು ಭೂಮಿಪೂಜೆ ನೆರವೇರಿಸಲಾಗಿದೆ. ಪ್ರಕೃತಿ ನಡುವೆ ವೇದಗಳ ಬೋಧನೆ ಆಗುತ್ತದೆ. ಸ್ಥಳೀಯರಿಗೂ ವೇದ ಶಿಕ್ಷಣದ ಸದುಪಯೋಗ ಸಿಗಲಿದ್ದು, ಗೋಶಾಲೆ ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ.
-ನಿರ್ಮಲಾ ಸೀತಾರಾಮನ್, ವಿತ್ತ ಸಚಿವೆ, ಕೇಂದ್ರ ಸರ್ಕಾರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net