ಐದು ವರ್ಷಗಳಿಂದ ಮನೆ ಕಟ್ಟದಿರುವ ಖಾಲಿನಿವೇಶನಗಳ ವಶಪಡಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಬಾಲಿಶವಾದದ್ದು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಾಮಸಾಗರ ಕೃಷ್ಣ ವ್ಯಂಗ್ಯ ಮಾಡಿದರು.
ಪಟ್ಟಣದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಕಡು ಬಡವರಿಗಾಗಿ ನಿವೇಶನ ನೀಡಿದೆ. ಸರ್ಕಾರವೇ ಯಾಕೆ ಅವರಿಗೆ ಮನೆ ಕಟ್ಟಿಕೊಳ್ಳಲು ಸಹಾಯಧನ ನೀಡುತ್ತಿಲ್ಲ.
ನಿವೇಶನ ನೀಡಿ ಮೂಗಿಗೆ ತುಪ್ಪ ಸವರಿ ಮತ್ತೆ ಬಡ ಜನರಿಂದ ಆ ನಿವೇಶನವನ್ನು ವಾಪಸ್ ಪಡೆಯುವುದಾಗಿ ಹೇಳಿಕೆ ನಿಡಿ ಅನ್ಯಾಯ ಮಾಡುತ್ತಿರುವುದು ಅವರ ಹುದ್ದೆಗೆ ಶೋಭೆ ತರುವಂತದ್ದಲ್ಲ ಎಂದರು.
ನಿಜವಾಗಿಯೂ ಬಡವರ ಮೇಲೆ ಮುಖ್ಯಮಂತ್ರಿಯವರಿಗೆ ಕಾಳಜಿ ಇದ್ದರೆ ಅವರು ನೀಡಿರುವ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಹಣ ಬಿಡುಗಡೆ ಮಾಡಲಿ. ಆಗ ಅವರಿಗೆ ಬಡವರ ಪರ ನಿಜವಾದ ಕಾಳಜಿ ಇದ್ದಂತೆ ಆಗುತ್ತದೆ. ಅದನ್ನು ಬಿಟ್ಟು ಬಲಗೈಲಿ ಕೊಟ್ಟು ಎಡಗೈಲಿ ಕಿತ್ತುಕೊಳ್ಳುವ ಅವರ ಈ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡವರ ಪರ ಯಾವುದೇ ಕಾಳಜಿ ಇಲ್ಲದ ಮುಖ್ಯಮಂತ್ರಿಯವರು, ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಿರುವ ಉಚಿತ ನಿವೇಶನಗಳನ್ನು ವಾಪಸ್ ಪಡೆಯುವ ಹೇಳಿಕೆ ನೀಡಿರುವುದು ಇವರ ನಡೆಯಲ್ಲಿಯೇ ತಿಳಿಯುತ್ತದೆ ಇವರಿಗೆಷ್ಟು ಬಡವರ ಪರ ಕಾಳಜಿ ಇದೆ ಎಂಬುದು.
ನಿಮ್ಮ ಮೇಲ್ವರ್ಗದವರ, ಶ್ರೀಮಂತರ ಬಗ್ಗೆ ಇರುವ ತಮ್ಮ ಕಾಳಜಿ ಎಲ್ಲರಿಗೂ ತಿಳಿಯುತ್ತಿದೆ. ನಿಮ್ಮ ಗೋಮುಖ ವ್ಯಾಘ್ರದ ಮುಖ ಬಡವರಿಗೆ ಅರ್ಥವಾಗುತ್ತಿದೆ. ಈಗಲಾದರೂ ನಿಮ್ಮ ನಯವಂಚಕ ಬಡ ವಿರೋಧಿ ನೀತಿಯನ್ನು ಬಿಟ್ಟು ಕೆಳ ವರ್ಗದ ಬಡವರ ಪರವಾಗಿ ನಿಲ್ಲುವಂತಾಗಿ ಎಂದರು.
ಹಿಂದಿನ ಸರ್ಕಾರಗಳು ಕೊಟ್ಟಿರುವ ನಿವೇಶನದಲ್ಲಿ ನೀವೇ ಮನೆಗಳನ್ನು ಮಂಜೂರು ಮಾಡಿ ಕಟ್ಟಿಸಿ ಕೊಡುವ ಕೆಲಸ ಮಾಡಿ. ಅದನ್ನು ಬಿಟ್ಟು ವಶಪಡಿಸಿಕೊಳ್ಳುವ ನಿಮ್ಮ ಈ ಹೇಳಿಕೆಯಿಂದ ಹಿಂದೆ ಸರಿಯಿರಿ. ಇಲ್ಲವಾದರೆ ಬಿಜೆಪಿ ನಿಮ್ಮ ಗೋಮುಖ ವ್ಯಾಘ್ರದ ಮುಖವಾಡವನ್ನು ಕಳಚುತ್ತದೆ ಎಂದು ಕಿಡಿಕಾರಿದರು.