ಶಹಾಬಾದ್: ಮುತ್ತಗಾ ಗ್ರಾಮದ ವಿದ್ಯಾರ್ಥಿಗಳು, ಸಾರ್ವಜನಿಕರು ಶಹಾಬಾದ್, ಚಿತ್ತಾಪುರಗೆ ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ನಿತ್ಯ ಹಳ್ಳಿಯಿಂದ ಹೆಚ್ಚುವರಿ ಬಸ್ಗಳನ್ನು ಓಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಬಸ್ ಸಂಚಾರ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.
ಗ್ರಾಮಕ್ಕೆ ಬೆಳಗ್ಗೆ ಹಾಗೂ ಸಂಜೆ ಒಂದು ಬಾರಿ ಮಾತ್ರ ಬಸ್ ಸಂಚರಿಸುತ್ತವೆ. ಹಳ್ಳಿಯೂ ಶಹಾಬಾದ್ ಹಾಗೂ ಚಿತ್ತಾಪುರದಿಂದ ಒಳಭಾಗದಲ್ಲಿದ್ದು, ನಿತ್ಯವೂ ಬೇರೆಡೆ ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳಿಗೆ ಶಾಲಾ&ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದೆ. ಒಮ್ಮೊಮ್ಮೆ ಬಸ್ ಬರುವುದೇ ಇಲ್ಲ ಎಂದು ಅಳಲು ತೋಡಿಕೊಂಡರು.
ಚಿತ್ತಾಪುರ ಡಿಪೋ ಅಧಿಕಾರಿಗಳು ದೂರವಾಣಿ ಮೂಲಕ ಗ್ರಾಮಸ್ಥರೊಂದಿಗೆ ಮಾತನಾಡಿ, ನಿಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಒಮ್ಮೆ ಕಚೇರಿಗೆ ಬಂದು ಸಮಸ್ಯೆ ಕುರಿತು ಸಮಗ್ರ ಮಾಹಿತಿ ನೀಡಿ ಎಂದು ತಿಳಿಸಿದರು. ಬಳಿಕ ಹೋರಾಟ ವಾಪಸ್ ಪಡೆಯಲಾಯಿತು.
ಪ್ರಮುಖರಾದ ಡಾ.ಮಹೇಂದ್ರ ಕೋರಿ, ನಾಗಣ್ಣ ಪೂಜಾರಿ, ಬಸವರಾಜ ಪಾಟೀಲ್, ನಾಗರಾಜ ಗರೂರ, ಮಹಾಂತೇಶ ಹೊನಗುಂಟಿ, ಶರಣು ಪಾಟೀಲ್, ರವಿ ಪಂಚಾಳ ಚಿತ್ತಾಪುರಕ್ಕೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಅನುಕೂಲಕ್ಕೆ ಬೆಳಗ್ಗೆ 8.30, 11ಕ್ಕೆ, ಮಧ್ಹಾಹ್ನ 2 ಹಾಗೂ ಸಂಜೆ 4.45ಕ್ಕೆ ಬಸ್ ಓಡಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಅಧಿಕಾರಿಗಳು ಸ್ಪಂದಿಸಿದರು.