ಕೋಟ್ಯಂತರ ಜನರಿಂದ ಆರ್‌ಎಸ್‌ಎಸ್‌ಗೆ ಮೆಚ್ಚುಗೆ: ಹಿಂದೂಗಳ ಸಂಖ್ಯೆ ಜಾಸ್ತಿಯಾಗಲಿ-RSS

ಆರ್‌ಎಸ್‌ಎಸ್‌ನ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ
ಆರ್‌ಎಸ್‌ಎಸ್‌ನ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ
Published on
ಬೆಂಗಳೂರು:ರಾಜ್ಯದ ವಿವಿಧ ಭಾಗಗಳಲ್ಲಿ ಹಿಂದೆಂದಿಗಿಂತಲೂ ವೈಭವಯುತವಾಗಿ ನಡೆದ ವಿಜಯದಶಮಿ, ಹಿಂದೂ ಸಮಾಜೋತ್ಸವ ಮತ್ತು ಗೃಹಸಂಪರ್ಕ ಅಭಿಯಾನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಈ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯ ಚಟುವಟಿಕೆಗಳನ್ನು ಕೋಟ್ಯಂತರ ಜನರು ಮೆಚ್ಚಿದ್ದಾರೆ ಎಂದು ಆರ್‌ಎಸ್‌ಎಸ್‌ನ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಹರ್ಷ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕದ ಕಾರ್ಯಚಟುವಟಿಕೆಗಳ ವಾರ್ಷಿಕ ವರದಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 2,194 ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ 19,61,158 ಮಂದಿ ಮತ್ತು 7,262 ವಿಜಯದಶಮಿ ಉತ್ಸವದಲ್ಲಿ 2,77,538 ಮಂದಿ ಭಾಗವಹಿಸಿದ್ದರು. ವಿವಿಧ ಕಡೆಗಳಲ್ಲಿ ನಡೆದ 562 ಪಥಸಂಚಲನದಲ್ಲಿ 2,21,963 ಮಂದಿ ಪಾಲ್ಗೊಂಡಿದ್ದರು. ಗೃಹಸಂಪರ್ಕ ಅಭಿಯಾನದಡಿ ಒಟ್ಟು 48,68,691 ಮನೆಗಳಿಗೆ ಭೇಟಿ ನೀಡಲಾಯಿತು. ಮನೆ ಮನೆಗೆ ಸಂಪರ್ಕ ಮಾಡಿದ್ದ ಸಂದರ್ಭದಲ್ಲಿ ಮತಾಂತರ, ಜನಸಂಖ್ಯೆ ಅಸಮತೋಲನ, ಡ್ರಗ್ಸ್ ಸೇರಿ ಸಮಾಜದ ಸಮಸ್ಯೆಗಳ ಬಗ್ಗೆ ಜನರು ಬೆಳಕು ಚೆಲ್ಲಿದ್ದರು ಎಂದರು.
ರಾಜ್ಯದ ಎಲ್ಲ ಗ್ರಾಮಗಳಲ್ಲಿ ಆರ್‌ಎಸ್‌ಎಸ್ ಶಾಖೆ ತೆರೆಯಲು ಗುರಿ ಹಾಕಿಕೊಂಡಿದ್ದೇವೆ. ಅಭಿಯಾನದಲ್ಲಿ ಸಾರ್ವಜನಿಕರು ಕೊಟ್ಟಿರುವ ಸಲಹೆಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಗ್ರಾಮೀಣ ಮಟ್ಟದಲ್ಲಿ ನಮ್ಮ ಕಾರ್ಯಚಟುವಟಿಕೆಗಳ ಕುರಿತು ಜನರಿಗೆ ತಲುಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಪ್ಪೇಸ್ವಾಮಿ ಹೇಳಿದರು.
ಮನೆಯ ಆಚಾರ- ವಿಚಾರ, ಸಂಸ್ಕೃತಿ, ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರ ನಿರ್ಮಾಣ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಶೈಲಿ, ಮಾತೃ ಭಾಷೆಯಲ್ಲಿ ವ್ಯವಹಾರ ಮತ್ತು ನಾಗರಿಕ ಶಿಷ್ಟಾಚಾರದ ಕುರಿತು ಜನರಿಗೆ ಅರಿವು ಮೂಡಿಸಲಾಗಿದೆ. ಹಿಂದೂ ಸಮಾಜೋತ್ಸವದಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಉತ್ಸಹದಿಂದ ಭಾಗಿಯಾಗಿದ್ದರು. ಕೆಲವೆಡೆ ಪಥಸಂಚಲನ, ಹಿಂದೂ ಸಮಾಜೋತ್ಸವ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವ ಕೆಲಸವಾಗಿತ್ತು. ಆದರೂ, ಎಲ್ಲ ಸವಾಲುಗಳನ್ನುಮೀರಿ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಮುಂದಿನ ದಿನಗಳಲ್ಲಿ ಇನ್ನಷ್ಟು ನಡೆಯಲಿವೆ ಎಂದು ತಿಪ್ಪೇಸ್ವಾಮಿ ಹೇಳಿದರು.
ಆರ್‌ಎಸ್‌ಎಸ್‌ನ ಪ್ರಾಂತ ಸಂಘಚಾಲಕರ ಜಿ.ಎಸ್.ಉಮಾಪತಿ ಇದ್ದರು.
ದಂಪತಿ 3-4 ಮಕ್ಕಳು ಮಾಡಿಕೊಳ್ಳಿ
ಹಿಂದೂ ಧರ್ಮ ನಾಶಪಡಿಸಲು ಯಾರಿಗೂ ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ನಶಿಸುತ್ತಿರುವ ಈ ಧರ್ಮವನ್ನು ಪುನರ್‌ತ್ಥಾನ ಮಾಡುವ ಅಗತ್ಯವಿದೆ. ಇದನ್ನು ಸಮಾಜವೇ ಮಾಡಬೇಕು. ಹಿಂದೂಗಳ ಸಂಖ್ಯೆ ಕುಸಿಯುತ್ತಿರುವ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಹೊಸದಾಗಿ ಮದುವೆಯಾಗುವ ದಂಪತಿಯು 3- 4 ಮಕ್ಕಳು ಮಾಡಿಕೊಳ್ಳಬೇಕು ಎಂದು ನಾ.ತಿಪ್ಪೇಸ್ವಾಮಿ ಕರೆ ನೀಡಿದರು.
ಕರ್ನಾಟಕ ಸೇರಿ ದೇಶಾದ್ಯಂತ 88,949 ಆರ್‌ಎಸ್‌ಎಸ್ ಶಾಖೆಗಳಿವೆ. ಕಳೆದ ವರ್ಷಗಿಂತ ಈ ಬಾರಿ 5,820 ಶಾಖೆಗಳು ಹೆಚ್ಚಿವೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಾವಿರಾರು ಮಂದಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದರು. ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡುತ್ತಿರುವವರಿಗೆ ಈಗಾಗಲೇ ಉತ್ತರ ನೀಡಿದ್ದೇವೆ ಎಂದು ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ನಾ.ತಿಪ್ಪೇಸ್ವಾಮಿ ಉತ್ತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net