ಸಾವಿರ ವರ್ಷ ಹಿಂದಿನ ಈ ದೇಗುಲಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಸ್ವಯಂಭು ಸೋಮೇಶ್ವರ, ಬಾವಿ ಬಸವಣ್ಣ, ಸಂಗಮೇಶ್ವರ, ಮಲ್ಲಿಕಾರ್ಜುನ, ಕಾಳಿಕಾ ದೇವಿ ಗುಡಿ, ಲಿಂಗ ಸ್ಥಾಪಿತ ಉಗ್ರಾಣ ಮಂಟಪವಲ್ಲದೆ ರಾಜ್ಯದ ಏಕೈಕ ಸುಸುಜ್ಜಿತ ಮಂಟಪ ಹೊಂದಿರುವ ಅಮೂಲ್ಯ ಶಾಸನವೂ ಇಲ್ಲಿದೆ. ಆದರೆ ಸ್ವಯಂಭು ಸೋಮೇಶ್ವರ ದೇವಸ್ಥಾನದ ಬಹುತೇಕ ಭಾಗಗಳು ನೆಲಸಮಗೊಂಡಿದ್ದವು. ಆಗಿನ ಶಿಲ್ಪಕಲೆಯನ್ನು ಹಾಗೆಯೇ ಉಳಿಸಿಕೊಂಡು ಮರು ನಿರ್ಮಾಣ ಮಾಡಲಾಗುತ್ತಿದ್ದು, ಬಹುತೇಕ ಕೆಲಸ ಪೂರ್ಣಗೊಂಡಿದೆ. ದೇವಾಲಯ ಮೇಲ್ಭಾಗದಲ್ಲಿ ನಾಲ್ಕು ಕಡೆ ಸಣ್ಣ ಸಣ್ಣ ಗೋಪುರ, ನಡುವೆ ಎತ್ತರ ಗೋಪುರದ ಕೆಲಸ ಮುಗಿದಿದೆ. ಒಳಗಡೆ ಈ ಹಿಂದೆ ಇದ್ದ ಬಸವಣ್ಣನ ಮೂರ್ತಿ ಬದಲಿಸಿ ಎಲ್ಲ ಕೆಲಸ ಮುಗಿದ ಬಳಿಕ ಸಾಂಪ್ರದಾಯಿಕ ಪೂಜೆಯೊಂದಿಗೆ ಹೊಸ ಮೂರ್ತಿ ಸ್ಥಾಪಿಸಲಾಗುವುದು ಎಂದು ದರ್ಶನಾಪುರ ತಿಳಿಸಿದ್ದಾರೆ.