ಖಾಸಗಿಯಲ್ಲಿ ಸೇವೆ ಸರ್ಕಾರಿ ವೈದ್ಯರಿಗೆ ಕಡಿವಾಣ

ಆರೋಗ್ಯ ಇಲಾಖೆ
ಆರೋಗ್ಯ ಇಲಾಖೆ
Published on

ಪ್ರಮುಖ ಮುಖ್ಯಾಂಶಗಳು

  • * ಖಾಸಗಿ ಆಸ್ಪತ್ರೆಗಳ ಒಪಿಡಿ ವಿಭಾಗದಲ್ಲಿ ಮಾತ್ರ ಖಾಸಗಿ ಅಭ್ಯಾಸಕ್ಕೆ ಅವಕಾಶ
ಬೆಂಗಳೂರು: ಸರ್ಕಾರಿ ಆಸ್ಪತ್ರೆ ವೈದ್ಯರು ಇನ್ನು ಮುಂದೆ ಖಾಸಗಿಯಲ್ಲಿ ಕೇವಲ ಹೊರರೋಗಿ ವಿಭಾಗಕ್ಕೆ (ಒಪಿಡಿ) ಮಾತ್ರ ಸೀಮಿತಗೊಳಿಸಿ ಕಾರ್ಯ ನಿರ್ವಹಿಸಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.
ಸರ್ಕಾರಿ ವೈದ್ಯರು ಖಾಸಗಿ ಅಭ್ಯಾಸ ಕೈಗೊಳ್ಳಲು ಅವಕಾಶವಿದೆ. ಆದರೆ, ಆ ಅಭ್ಯಾಸವು ಸರ್ಕಾರಿ ಆಸ್ಪತ್ರೆಯಲ್ಲಿನ ಕರ್ತವ್ಯಗಳಿಗೆ ಅಡ್ಡಿಯಾಗಬಾರದು. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳ ಚಿಕಿತ್ಸೆಯಲ್ಲಿ ತೊಡಗುವುದರಿಂದ, ಸರ್ಕಾರಿ ಆಸ್ಪತ್ರೆಗಳಲ್ಲಿ ಅವರ ಕಾರ್ಯನಿರ್ವಹಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಆದ್ದರಿಂದ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳ ಒಪಿಡಿ ವಿಭಾಗದಲ್ಲಿ ಮಾತ್ರ ಖಾಸಗಿ ಅಭ್ಯಾಸ ಮಾಡಬಹುದಾಗಿದೆ. ಅದು ಕೂಡ ನಿಯಮಿತ ಕರ್ತವ್ಯಗಳಿಗೆ ಅಡ್ಡಿಯಾಗದಂತೆ, ಕರ್ತವ್ಯದ ಸಮಯದ ಬಳಿಕ ಅಭ್ಯಾಸ ನಡೆಸಬಹುದು. ಆ ವಿವರಗಳನ್ನು ಇಲಾಖೆ ಅಧಿಕಾರಿಗಳಿಗೆ ಒದಗಿಸಬೇಕು. ಈಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಕಾನೂನಿನಡಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಎಚ್ಚರಿಸಿದೆ.
ಖಾಸಗಿ ಅಭ್ಯಾಸದ ಕಾರಣ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಆರೈಕೆ ನಿರ್ಲಕ್ಷಿಸಿರುವುದು, ಇದರಿಂದ ರೋಗಿ ಮೃತಪಟ್ಟಿರುವ ಬಗ್ಗೆ ಲೋಕಾಯುಕ್ತರು ಈ ಹಿಂದೆ ಗಮನಸೆಳೆದಿದ್ದರು. ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ತನ್ನ ವರದಿಯಲ್ಲಿ ಸರ್ಕಾರಿ ವೈದ್ಯರ ಖಾಸಗಿ ಅಭ್ಯಾಸವನ್ನು ನಿಯಂತ್ರಿಸಲು ಶಿಫಾರಸು ಮಾಡಿತ್ತು. ಕೇರಳದಲ್ಲಿ ಇದೇ ರೀತಿ ನಿರ್ಬಂಧ ಜಾರಿಯಲ್ಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net