ಚಿಟ್ಟೆ ಚರ್ಮದ ಕಾಯಿಲೆ ತಡೆಗೆ ಸಂಶೋಧನೆ

ಶ್ರೀ ಮಧುಸೂದನ ಸಾಯಿ ಆಸ್ಪತ್ರೆ
ಶ್ರೀ ಮಧುಸೂದನ ಸಾಯಿ ಆಸ್ಪತ್ರೆ
Published on
ಬೆಂಗಳೂರು: ಆನುವಂಶಿಕ ಚರ್ಮರೋಗ ಎಪಿಡರ್ಮೊಲಿಸಿಸ್ ಬುಲ್ಲೋಸಾ (ಚಿಟ್ಟೆ ಚರ್ಮದ ಕಾಯಿಲೆ) ಕುರಿತು ಸಂಶೋಧನೆಗಾಗಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) 5.50 ಕೋಟಿ ರೂ. ಅನುದಾನ ನೀಡಿದೆ.
ಎಪಿಡರ್ಮೊಲಿಸಿಸ್ ಬುಲ್ಲೋಸಾ ಕಾಯಿಲೆಗೆ ಕೈಗೆಟುಕುವ ದರದಲ್ಲಿ ರೋಗಪತ್ತೆ ಮತ್ತು ಚಿಕಿತ್ಸೆ ಹೆಸರಿನ ಈ ಯೋಜನೆಯನ್ನು ಶ್ರೀ ಮಧುಸೂದನ ಸಾಯಿ ಆಸ್ಪತ್ರೆಯ ಡಾ. ವಂಶೀಕೃಷ್ಣ ಯೆನಮಂದ್ರ ಪ್ರಧಾನ ಸಂಶೋಧಕರಾಗಿ ಮುನ್ನಡೆಸಲಿದ್ದಾರೆ. ಇದೇ ಆಸ್ಪತ್ರೆಯ ಡಾ. ದಿವ್ಯಾ ಶೇಷಾದ್ರಿ, ಡಾ. ಮನೋಜ್ ಶ್ರೀನಿವಾಸ್ ಹಾಗೂ ಮೆಹಬೂಬ್‌ನಗರದ ಎಸ್‌ವಿಎಸ್ ವೈದ್ಯಕೀಯ ಕಾಲೇಜಿನ ಡಾ. ಶರತ್‌ಚಂದ್ರ ಕೊಂಡ ಸಹ ಸಂಶೋಧಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 4 ವರ್ಷದಲ್ಲಿ ಈ ಅನುದಾನ ಬಳಸಿಕೊಂಡು ಸಂಶೋಧನೆ ನಡೆಸಬೇಕೆಂದು ಸೂಚಿಸಲಾಗಿದೆ.
ಎಪಿಡರ್ಮೊಲಿಸಿಸ್ ಬುಲ್ಲೋಸಾ ಅಪರೂಪದ ಚರ್ಮರೋಗ. ಸಣ್ಣ ಪ್ರಮಾಣದ ಉಜ್ಜುವಿಕೆ ಅಥವಾ ಗಾಯವಾದರೂ ಚರ್ಮದ ಮೇಲೆ ಗುಳ್ಳೆಗಳು ಹಾಗೂ ಗಾಯಗಳು ಉಂಟಾಗುತ್ತವೆ. ಇದನ್ನು ಚಿಟ್ಟೆ ಚರ್ಮದ ಕಾಯಿಲೆ ಎಂದು ಕರೆಯಲಾಗುತ್ತದೆ. ಇದರಿಂದ ಬಳಲುವವರ ಚರ್ಮವು ಚಿಟ್ಟೆಯ ರೆಕ್ಕೆಗಳಷ್ಟೇ ಸೂಕ್ಷ್ಮವಾಗಿರುತ್ತದೆ ಎಂಬ ಕಾರಣಕ್ಕೆ ಈ ಹೆಸರು ಬಳಕೆಯಲ್ಲಿದೆ. ಇದರಿಂದ ದೀರ್ಘಕಾಲೀನ ಗಾಯಗಳು, ಕಲೆಗಳು, ಪೌಷ್ಟಿಕಾಂಶದ ಕೊರತೆ ಹಾಗೂ ಚರ್ಮದ ಕ್ಯಾನ್ಸರ್ ಸೇರಿ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ.
ದೇಶದಲ್ಲಿ ಈ ಕಾಯಿಲೆಗೆ ಸಂಬಂಧಿಸಿದ ರಾಷ್ಟ್ರೀಯ ಮಟ್ಟದ ನೋಂದಣಿ ವ್ಯವಸ್ಥೆ ಸದ್ಯಕ್ಕೆ ಇಲ್ಲ. ಲಭ್ಯವಿರುವ ಆನುವಂಶಿಕ ಪರೀಕ್ಷೆಗಳು ಹಾಗೂ ವಿಶೇಷ ವೈದ್ಯಕೀಯ ಸೇವೆಗಳು ಕೂಡ ಸೀಮಿತವಾಗಿವೆ. ಕಾಯಿಲೆಯ ಪತ್ತೆಯಲ್ಲಿ ವಿಳಂಬವಾಗುವುದರ ಜತೆಗೆ, ಆನುವಂಶಿಕ ಸಲಹೆ ಪಡೆಯುವುದರಲ್ಲಿಯೂ ತೊಂದರೆಗಳು ಎದುರಾಗುತ್ತಿವೆ. ಭಾರತದಲ್ಲಿ ಪ್ರತಿ 114 ಜನರಲ್ಲಿ ಸರಾಸರಿ ಒಬ್ಬರಿಗೆ ವಂಶವಾಹಿಗಳ ಮೂಲಕ ಚರ್ಮದ ಕಾಯಿಲೆ ಬರುವ ಅಪಾಯವಿದೆ ಎಂದು ಅಂದಾಜಿಸಲಾಗಿದೆ. ಇದರರ್ಥ, ಆ ವ್ಯಕ್ತಿಗೆ ಕಾಯಿಲೆ ಇದೆ ಎಂದಲ್ಲ. ಅವರು ಆರೋಗ್ಯವಾಗಿಯೇ ಇರಬಹುದು. ಅವರಿಂದ ಮುಂದಿನ ತಲೆಮಾರಿಗೆ ಕಾಯಿಲೆ ವರ್ಗಾವಣೆ ಆಗುವ ಅಪಾಯ ಇರುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಕಡಿಮೆ ವೆಚ್ಚದಲ್ಲಿ ವಂಶವಾಹಿ ಪರೀಕ್ಷೆ

ಪ್ರಸ್ತುತ ಚಾಲ್ತಿಯಲ್ಲಿರುವ ಸಂಪೂರ್ಣ ವಂಶವಾಹಿಯನ್ನು ವಿಶ್ಲೇಷಿಸುವ ಪರೀಕ್ಷೆಗಳಿಗೆ ಹೋಲಿಸಿದರೆ ಶೇ.60 ಕಡಿಮೆ ವೆಚ್ಚದಲ್ಲಿ ಉದ್ದೇಶಿತ ಆನುವಂಶಿಕ ಪರೀಕ್ಷಾ ಕ್ರಮಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ. ಕಾಯಿಲೆಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ತಂತುಗಳನ್ನು ಗುರುತಿಸುವುದು ಹಾಗೂ ಗರ್ಭದಲ್ಲಿರುವ ಶಿಶುವಿನಲ್ಲಿ ಕಾಯಿಲೆಯನ್ನು ಪತ್ತೆಹಚ್ಚಲು ಇವುಗಳನ್ನು ಬಳಸುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತದೆ. ದೇಹದ ಕೆಲವು ಜೀವಕೋಶಗಳಲ್ಲಿ ಸಹಜವಾಗಿ ನಡೆಯುವ ಆನುವಂಶಿಕ ಸ್ವಯಂ ಸರಿಪಡಿಸುವ ಪ್ರಕ್ರಿಯೆಯನ್ನು ಅಧ್ಯಯನ ಮಾಡಲಾಗುತ್ತದೆ. ಇದರ ಮೂಲಕ ವ್ಯಕ್ತಿಯ ಅಗತ್ಯಕ್ಕೆ ಅನುಗುಣವಾಗಿ ಪುನರುತ್ಪಾದಕ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತದೆ.

ಕಾಯಿಲೆಗೆ ತಕ್ಕ ಚಿಕಿತ್ಸೆ

ಸಂಶೋಧನೆಯು ಈಗಾಗಲೇ ಲಭ್ಯವಿರುವ, ಕಡಿಮೆ ವೆಚ್ಚದಲ್ಲಿ ಬಳಸಬಹುದಾದ ಔಷಧಗಳನ್ನು ಪರಿಶೀಲನೆಗೆ ಒಳಪಡಿಸಲಿದೆ. ಕಾಯಿಲೆಗೆ ಸಂಬಂಧಿಸಿದ ಜೈವಿಕ ಪ್ರಕ್ರಿಯೆಗಳ ಮೇಲೆ ಔಷಧಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ. ರೋಗಿಯ ಆನುವಂಶಿಕ ಗುಣಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತದೆ. ಕಾಯಿಲೆಯ ತಡೆಗಟ್ಟುವಿಕೆ, ಮುಂಚಿತವಾಗಿ ಅಂದಾಜು ಮಾಡುವುದು, ಚಿಕಿತ್ಸೆ ಹಾಗೂ ವಂಶವಾಹಿ ಪರೀಕ್ಷೆಗಳನ್ನು ಆಧರಿಸಿದ ವೈದ್ಯಕೀಯ ವಿಧಾನಗಳನ್ನು ಒಂದೇ ಸಂಶೋಧನಾ ಚೌಕಟ್ಟಿನಡಿ ತರುವುದು ಈ ಯೋಜನೆಯ ಮತ್ತೊಂದು ಮುಖ್ಯ ಉದ್ದೇಶ. ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸಾ ಕ್ರಮಗಳನ್ನು ರೂಪಿಸುವ ಬಗ್ಗೆಯೂ ಸಂಶೋಧಕರು ಗಮನಹರಿಸಲಿದ್ದಾರೆ.
"

ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಸರಿಯಾದ ಸಮಯದಲ್ಲಿ ಕಾಯಿಲೆಯ ಪತ್ತೆ ಮತ್ತು ವಿಶೇಷ ವೈದ್ಯಕೀಯ ಸೇವೆಗಳು ಲಭ್ಯವಾಗದಿರುವುದು ದೊಡ್ಡ ಸವಾಲಾಗಿದೆ. ಕಡಿಮೆ ವೆಚ್ಚದಲ್ಲಿ, ಎಲ್ಲೆಡೆ ಅಪರೂಪದ ಕಾಯಿಲೆಗಳಿಗೆ ನಿರ್ದಿಷ್ಟ ಚಿಕಿತ್ಸಾ ಕ್ರಮಗಳು ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿ.

— ಡಾ.ವಂಶೀಕೃಷ್ಣ ಯೆನಮಂದ್ರ, ಯೋಜನೆಯ ಮುಖ್ಯ ಸಂಶೋಧಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net