ಹದಗೆಟ್ಟ ರಾಜ್ಯ ಹೆದ್ದಾರಿ ದುರಸ್ತಿ ಮಾಡಿ

 ಹಾಳಾಗಿರುವ ರಾಜ್ಯ ಹೆದ್ದಾರಿ ದುರಸ್ತಿ ಮಾಡುವಂತೆ ಒತ್ತಾಯಿಸಿ ತೊನಸನಳ್ಳಿ(ಎಸ್​) ಗ್ರಾಮದ ರಸ್ತೆ ಮಧ್ಯೆ ಟೆಂಟ್​ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹಾಳಾಗಿರುವ ರಾಜ್ಯ ಹೆದ್ದಾರಿ ದುರಸ್ತಿ ಮಾಡುವಂತೆ ಒತ್ತಾಯಿಸಿ ತೊನಸನಳ್ಳಿ(ಎಸ್​) ಗ್ರಾಮದ ರಸ್ತೆ ಮಧ್ಯೆ ಟೆಂಟ್​ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ತೊನಸನಳ್ಳಿ(ಎಸ್​) ಗ್ರಾಮಸ್ಥರಿಂದ ಪ್ರತಿಭಟನೆ
  • ರೋಡ್​ ಮೇಲೆ ಟೆಂಟ್​ ಹಾಕಿ, ಭಜನೆ ಮಾಡಿ ಆಕ್ರೋಶ
ಶಹಾಬಾದ್​: ತೊನಸನಳ್ಳಿ(ಎಸ್​) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಶನಿವಾರ ಬೆಳಗ್ಗೆ ರಸ್ತೆ ಮಧ್ಯದಲ್ಲಿಯೇ ಟೆಂಟ್​ ಹಾಕಿ, ಭಜನೆ ಮಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಜೇವರ್ಗಿ&ಶಹಾಬಾದ್​ ಸಂಪರ್ಕಿಸುವ ರಾಜ್ಯ ಹೆದ್ದಾರಿ&125 ಸಂಪೂರ್ಣ ಕೆಟ್ಟು ಹೋಗಿದ್ದು, ಭಾರಿ ಪ್ರಮಾಣದ ತೆಗ್ಗುಗಳು ಬಿದ್ದಿವೆ. ಹಲವು ಬಾರಿ ಬೃಹತ್​ ತಗ್ಗುಗಳಿಯೇ ಬಸ್​ಗಳು ಸಿಲುಕಿ ಪ್ರಯಾಣಿಕರು ಪರದಾಡಿದ್ದಾರೆ. ಹಲವಾರು ಬಾರಿ ನಿಯೋಗ ಹಾಗೂ ಪ್ರತಿಭಟನೆ ಮೂಲಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್​, ಜಿಲ್ಲಾಧಿಕಾರಿ, ಶಾಸಕರು ಹಾಗೂ ಸಚಿವರಿಗೆ ಮನವಿಪತ್ರ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
ತಹಶೀಲ್ದಾರ್​ ನೀಲಪ್ರಭ ಬಬಲಾದ, ಪಿಐ ಪರಶುರಾಮ ವನಂಜಕರ ಅವರು ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಕಾಮಗಾರಿ ಕುರಿತು ಕಡತ ಪ್ರಗತಿಯಲ್ಲಿದ್ದು, ಜಿಲ್ಲಾಧಿಕಾರಿಗಳು ಹೊಸದಾಗಿ ಬಂದಿದ್ದರಿಂದ ಗ್ರಾಮಸ್ಥರ ನಿಯೋಗ ಬಂದರೆ, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿಸುವುದಾಗಿ ಹೇಳಿದರು.
ತಹಸೀಲ್ದಾರ್​ ಅವರ ಮನವಿಗೆ ಒಪ್ಪದ ಪ್ರತಿಭಟನಾಕಾರರು, ಈ ಹಿಂದೆ ತಮಗೆ, ಡಿಸಿಗೆ ಮನವಿ ಸಲ್ಲಿಸಿದ್ದು, ಹಿಂದಿನ ಜಿಲ್ಲಾಧಿಕಾರಿಗಳು ಕೇವಲ 15 ದಿನಗಳಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಆರು ತಿಂಗಳಾದರು ಕೆಲಸ ಶುರುವಾಗಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ, ನಿಗದಿತ ಸಮಯದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸುವ ಬಗ್ಗೆ ಭರವಸೆ ನೀಡಿದಾಗ ಮಾತ್ರ ಪ್ರತಿಭಟನೆ ವಾಪಸ್​ ಪಡೆಯಲಾಗುವುದು ಎಂದು ಸ್ಪಷ್ಪಪಡಿಸಿದರು.
ಸಂಗಮೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಾಥ್​ ನೀಡಿದರು. ಪ್ರಮುಖರಾದ ಬಸವರಾಜ ಗೊಳೇದ, ಬಸವರಾಜ ಮದ್ರಕಿ, ಬೆಳ್ಳಪ್ಪ ಖಣದಾಳ, ಮಲ್ಲಣ್ಣ ಮರತೂರ, ನಾಗೇಂದ್ರ ಹುಗ್ಗಿ, ಭೀಮರಾವ ಹೂಗಾರ, ಸಿದ್ದು ಸಜ್ಜನ್​, ಅಲ್ಲಮಪ್ರಭು ಮಂಗಳೂರ, ಮರಲಿಂಗ ಹುಗ್ಗಿ, ಅಲ್ಲಾಭಕ್ಷ ಜಮಾದಾರ, ಮಂಜುನಾಥ ಇಟಗಿ, ಅಂಬರೀಷ ಕಲಬುರಗಿ, ಮಹೇಶ ಬಂದಳ್ಳಿ, ಮಲ್ಲು ಗೊಳೇದ, ಪ್ರಶಾಂತ ರಾಮಶೆಟ್ಟಿ, ನಾಗಣ್ಣ ರಾಂಪೂರೆ ಇತರರಿದ್ದರು.
ರಾತ್ರಿವರೆಗೂ ಪ್ರತಿಭಟನೆ ಮುಂದುವರೆದಿದ್ದರಿಂದ ವಾಡಿ, ಮಳಖೇಡ, ಸೇಡಂದಿಂದ ಜೇವರ್ಗಿ ಮಾರ್ಗವಾಗಿ ಹೋಗುವ ವಾಹನಗಳನ್ನು ಶಹಾಬಾದ್​, ಕಲಬುರಗಿ ಮಾರ್ಗವಾಗಿ ಹಾಗೂ ಜೇವರ್ಗಿಯಿಂದ ಶಹಾಬಾದ್​ ಮಾರ್ಗವಾಗಿ ಬರುವ ವಾಹನಗಳನ್ನು ಕಲಬುರಗಿ ಮಾರ್ಗವಾಗಿ ಕಳುಹಿಸಲಾಯಿತು.
ಅಸಹಾಯಕತೆ ತೋಡಿಕೊಂಡ ಶಾಸಕ
ತೊನಸನಳ್ಳಿ(ಎಸ್​) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿರುವ ಕುರಿತು ಸೂಕ್ತ ಪೋಟೋ ಹಾಗೂ ವಿಡಿಯೋ ಕ್ಲಿಪ್​ ಮೂಲಕ ಜಿಲ್ಲೆ ಹಾಗೂ ರಾಜ್ಯದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸೂಕ್ತ ಅನುದಾನ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದೇನೆ. ಆದರೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ನಾನೀಗ ಬೆಂಗಳೂರಿನಲ್ಲಿ ಇದ್ದೇನೆ. ಸ್ಥಳಿಯವಾಗಿದ್ದರೆ ನಾನು ಗ್ರಾಮಸ್ಥರೊಂದಿಗೆ ಹೋರಾಟಕ್ಕೆ ಕುಳಿತುಕೊಳ್ಳುತ್ತಿದ್ದೆ. ಈ ವರ್ಷ ಕೆಕೆಆರ್​ಡಿಬಿಯಿಂದ ಬರುವ ನನ್ನೆಲ್ಲ ಅನುದಾನ ಈ ರಸ್ತೆಗೆ ನೀಡುವೆ ಎಂದು ಶಾಸಕ ಬಸವರಾಜ ಮತ್ತಿಮಡು ದೂರವಾಣಿ ಮೂಲಕ ವಿಜಯವಾಣಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net