ಆ.12ರಿಂದ ಧಾರ್ಮಿಕ ಪ್ರವಚನ

ಶ್ರೀ ಶರಣಬಸವೇಶ್ವರ ದೇವಸ್ಥಾನ
ಶ್ರೀ ಶರಣಬಸವೇಶ್ವರ ದೇವಸ್ಥಾನ
Published on

ಪ್ರಮುಖ ಮುಖ್ಯಾಂಶಗಳು

  • ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಮಾಹಿತಿ
  • ಶರಣಬಸವೇಶ್ವರ ಸಂಸ್ಥಾನದಿಂದ 40 ದಿನ ಕಾರ್ಯಕ್ರಮ
ಕಲಬುರಗಿ: ಶ್ರಾವಣ ಮಾಸ, ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರ ಪ್ರಥಮ ಪುಣ್ಯತಿಥಿ ಹಾಗೂ 7ನೇ ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ ಅವರ 43ನೇ ಪುಣ್ಯತಿಥಿ ಸ್ಮರಣಾರ್ಥ ಆ.12ರಿಂದ ಶರಣಬಸವೇಶ್ವರ ದೇವಸ್ಥಾನ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧೀನದ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಮಾಹಿತಿ ನೀಡಿದರು.
ದಾಸೋಹ ಮಹಾಮನೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ ನೇತೃತ್ವ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷರೂ ಆದ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವ ಅವರ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಡಾ.ಶರಣಬಸವಪ್ಪ ಅಪ್ಪ ಅವರು ಸಮಾಜಕ್ಕೆ, ವಿಶೇಷವಾಗಿ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆ ಜನತೆಗೆ ಪರಿಚಯಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ 30 ದಿನ ನಿತ್ಯ ಒಂದು ಗಂಟೆ ಸಂತ ಶರಣಬಸವೇಶ್ವರರ ಜೀವನ ಮತ್ತು ಸಂದೇಶ ಕುರಿತು ಸುಂಟನೂರಿನ ಬಂಡಯ್ಯ ಶಾಸ್ತ್ರಿಗಳು ಧಾರ್ಮಿಕ ಪ್ರವಚನ ನಡೆಸಿಕೊಡುವರು. ಜತೆಗೆ ಡಾ.ಶರಣಬಸವಪ್ಪ ಅಪ್ಪ ಅವರು ಶಿಕ್ಷಣ, ಸಮಾಜಸೇವೆ ಹಾಗೂ ವಿವಿಧ ಕ್ಷೇತ್ರಗಳಿಗೆ ನೀಡಿರುವ ಜೀವಮಾನದ ಸಾಧನೆ ಕುರಿತು 40 ದಿನಗಳ ಕಾಲ ವಿಶೇಷ ಉಪನ್ಯಾಸ ಜರುಗಲಿದೆ. ಶಿಕ್ಷಣ ತರು, ಸಮಾಜ ಸೇವಕರು ಹಾಗೂ ಡಾ.ಅಪ್ಪ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿದ ಗಣ್ಯರು ಉಪನ್ಯಾಸ ನೀಡಲಿದ್ದಾರೆ ಎಂದರು.
9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ, ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ್​ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ.ಎಸ್​.ಎಚ್​.ಹೊನ್ನಳ್ಳಿ, ಹಣಕಾಸು ಅಧಿಕಾರಿ ಡಾ.ಕಿರಣ್​ ಮಕಾ, ಡೀನ್​ ಶಿವಕುಮಾರ ಜವಳಿಗಿ, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಸುರೇಶ್​ ನಂದಗಾಂವ್​, ಡಾ.ಶಿವರಾಜ ಶಾಸಿ ಇತರರಿದ್ದರು.
ಸೆ.2ರಂದು ಪ್ರಥಮ ಪುಣ್ಯಸ್ಮರಣೆ
ಕ್ರೀಡಾಕೂಟ, ಮ್ಯಾರಥಾನ್​, ಆರೋಗ್ಯ ತಪಾಸಣೆ ಉಚಿತ ಶಿಬಿರ, ರಕ್ತದಾನ ಶಿಬಿರ, ಸ್ವಚ್ಛತಾ ಹಾಗೂ ಜಾಗೃತಿ ಅಭಿಯಾನ, ಮಹಿಳಾ ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರ ಬೈಕ್ ರ‍್ಯಾಲಿ​ ಸೇರಿ ಡಾ.ಶರಣಬಸವಪ್ಪ ಅಪ್ಪ ಅವರ ಸಾಧನೆ ಪರಿಚಯಿಸುವ ಹತ್ತು ಹಲವು ಕಾರ್ಯಕ್ರಮಗಳು ಜರುಗಲಿವೆ. ಹಿಂದೂ ಪಂಚಾಂಗದ ಪ್ರಕಾರ ಡಾ.ಶರಣಬಸವಪ್ಪ ಅಪ್ಪ ಅವರ ಪ್ರಥಮ ಪುಣ್ಯತಿಥಿ ಸೆ.2ರಂದು ನಡೆಯಲಿದ್ದು, ಆ ದಿನ ಜರುಗುವ ಭವ್ಯ ಸಮಾರಂಭದಲ್ಲಿ ವಿವಿಧ ಮಠಾಧೀಶರು ಭಾಗವಹಿಸುವರು. ಡಾ. ನೀಲಾಂಬಿಕಾ ಶೇರಿಕಾರ್​ ಸಂಪಾದಿಸಿರುವ ಡಾ.ಶರಣಬಸವಪ್ಪ ಅಪ್ಪ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವಿವಿಧ ಗಣ್ಯರ ಲೇಖನಗಳು ಹಾಗೂ ನೆನಪುಗಳ ಸಂಕಲನ ಮಹಾಮಾನವ ಕೃತಿ ಲೋಕಾರ್ಪಣೆಗೊಳ್ಳಲಿದೆ ಎಂದು ಡಾ.ಅವ್ವ ಮಾಹಿತಿ ನೀಡಿದರು.
ಶಿಕ್ಷಕರಿಗೆ ಪ್ರಶಸ್ತಿ, ಸತ್ಕಾರ
ವಿವಿಧ ಶಾಲಾ-ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಸಾಧಿಸಲು ಶ್ರಮಿಸಿದ ಅತ್ಯುತ್ತಮ ಶಿಕ್ಷಕರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶ್ರಾವಣೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು. ಈ ಅವಧಿಯಲ್ಲಿ ಅಂತರ್​ಶಾಲಾ ಹಾಗೂ ಅಂತರ್​ಕಾಲೇಜು ವಾಲಿಬಾಲ್​ ಪಂದ್ಯಾವಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ಮ್ಯಾರಥಾನ್​ ಸೇರಿ ವಿವಿಧ ಕ್ರೀಡಾ ಚಟುವಟಿಕೆ ಆಯೋಜಿಸಲು ತೀರ್ಮಾನಿಸಲಾಯಿತು.
"

ವಿಶ್ವವಿದ್ಯಾಲಯ, ಕಾಲೇಜುಗಳು ಹಾಗೂ ಶಾಲೆಗಳಲ್ಲಿ ಡಾ.ಶರಣಬಸವಪ್ಪ ಅಪ್ಪ ಅವರ ಜೀವನ ಹಾಗೂ ಆದರ್ಶಗಳ ಕುರಿತು ಭಾಷಣ, ಚರ್ಚಾ ಸ್ಪರ್ಧೆ, ಚಿತ್ರಕಲೆ, ಸಂಗೀತ ಹಾಗೂ ಇತರೆ ಸಾಂಸತಿಕ ಸ್ಪರ್ಧೆ ನಡೆಸಲು ನಿರ್ಧರಿಸಲಾಗಿದೆ.

— > ಡಾ.ದಾಕ್ಷಾಯಿಣಿ ಎಸ್​.ಅಪ್ಪ, ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net