ರಾಮನಗರ : ಹಿರಿಯರಿಗೆ ದಿನಪತ್ರಿಕೆ ಸುಲಭವಾಗಿ ಓದಲು ಸಿಗುವ ಹಾಗೆಯೇ ಯುವ ಪೀಳಿಗೆಗೆ ಕನ್ನಡ ದಿನಪತ್ರಿಕೆಗಳ ಮಹತ್ವ ತಿಳಿಸಲು ರಾಜ್ಯದಲ್ಲೇ ಹೊಸ ಹೆಜ್ಜೆ ಇಟ್ಟಿರುವ ರಾಮನಗರ ನಗರಸಭೆ ನಗರದ ವಿವಿಧ ಉದ್ಯಾನವನಗಳಲ್ಲಿ ಬಸ್ ನಿಲ್ದಾಣಗಳಲ್ಲಿ ದಿನಪತ್ರಿಕೆ ಓದುಗರ ವಾಚನಾಲಯಕ್ಕೆ ಗುರುವಾರ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ (ಶಶಿ) ಚಾಲನೆ ನಿಡಿದರು.
ಜಿಲ್ಲಾ ಕೇಂದ್ರದ ಪ್ರಮುಖ ಕುವೆಂಪು ಉದ್ಯಾನವನ, ಅರ್ಕಾವತಿ ಬಡಾವಣೆ ಲುಂಬಿನಿ ಉದ್ಯಾನವನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹತ್ತಿರ ಸೇರಿ 11ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳದಲ್ಲಿ ಓದುಗರ ವಾಚಲನಾಲಯ ಸ್ಥಾಪಿಸಿರುವ ರಾಮನಗರ ನಗರಸಭೆ, ಪ್ರತಿ ನಿತ್ಯ ರಾಜ್ಯ ಹಾಗೂ ಸ್ಥಳೀಯ ಮಟ್ಟದ ವಿಜಯವಾಣಿ ಸೇರಿ 10ಕ್ಕೂ ಹೆಚ್ಚು ಪತ್ರಿಕೆಗಳನ್ನು ನಗರಸಭೆ ವತಿಯಿಂದ ಸಾರ್ವಜನಿಕರಿಗೆ ನೀಡಲಾಗುತ್ತಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ (ಶಶಿ) ಮಾತನಾಡಿ, ರಾಮನಗರ ನಗರಸಭೆಯಿಂದ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ದಿನಪತ್ರಿಕೆಯನ್ನು ಪೂರೈಸಲಾಗುತ್ತದೆ ಎಂದರು.
ಈ ಸಂಬಂಧ ರಾಮನಗರ ನಗರಸಭೆ ಬಜೆಟ್‌ನಲ್ಲಿ ಒಟ್ಟು 2 ಲಕ್ಷ ರೂ. ನೀಡಲಾಗಿತ್ತು. ಹಾಗಾಗಿ ದಿನ ಪತ್ರಿಕೆ ಪೂರೈಕೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಸಾರ್ವಜನಿಕರು ಪತ್ರಿಕೆ ಓದಿ ಅದೇ ಸ್ಥಳದಲ್ಲಿಯೇ ಇಡಬೇಕಾಗುತ್ತದೆ ಎಂದರು.
ನಗರಸಭೆ ಆಯುಕ್ತ ಡಾ. ಜಯಣ್ಣ, ಸದಸ್ಯರಾದ ಮಂಜುನಾಥ್, ಪಾರ್ವತಮ್ಮ, ಪವಿತ್ರ ಲಕ್ಷ್ಮೀಕಾಂತ್, ವಿಜಯಕುಮಾರಿ, ಮಂಜುಳಾ ವೆಂಕಟೇಶ್ ಇದ್ದರು.
ಮೊಬೈಲ್‌ಗೆ ದಾಸರಾಗುತ್ತಿರುವ ಇತ್ತೀಚಿನ ದಿನದಲ್ಲಿ ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಿನೂತನ ಪ್ರಯೋಗಕ್ಕೆ ನಗರಸಭೆ ಮುಂದಾಗಿದೆ. ಸಾರ್ವಜನಿಕ ಸ್ಥಳದಲ್ಲಿ ದಿನ ಪತ್ರಿಕೆ ನೀಡಿ, ವಾಚನಾಲಯ ಸ್ಥಾಪಿಸಿಸುವ ಮೂಲಕ ನಮ್ಮ ನಗರಸಭೆ ರಾಜ್ಯದಲ್ಲಿಯೇ ಮಾದರಿಯಾಗಿದೆ.