ಬಸವಕಲ್ಯಾಣ: ನೀಟ್ ಪರೀಕ್ಷೆಯಲ್ಲಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ, ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯ ಖಂಡಿಸಿ ಹಾಗೂ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯವನ್ನು ನೆಲಸಮಗೊಳಿಸುವ ಆದೇಶವನ್ನು ವಿರೋಧಿಸಿ ಗುರುವಾರ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ(ಎಸ್ಐಒ) ಹಾಗೂ ಸಾಲಿಡಾರಿಟಿ ಯೂತ್ ಮೂವ್ಮೆಂಟ್(ಎಸ್ವೈಎಂ) ಸಹಯೋಗದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.
ನಗರದ ಗಾಂಧಿ ವೃತ್ತದಿಂದ ಮುಖ್ಯರಸ್ತೆ ಮಾರ್ಗವಾಗಿ ಡಾ.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ ಬೇಡಿಕೆ ಕುರಿತು ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಲಾಯಿತು.
ಸಾಲಿಡಾರಿಟಿ ಯೂತ್ ಮೂವ್ಮೆಂಟ್ ತಾಲೂಕು ಅಧ್ಯಕ್ಷ ಡಾ. ಜಬಿಯುಲ್ಲಾ ಖಾನ್ ಮಾತನಾಡಿ, ನವದೆಹಲಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿದರು. ಎನ್ಟಿಎ ರದ್ದುಪಡಿಸಬೇಕು. ನೀಟ್ ಪರೀಕ್ಷೆ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ಆಗಬೇಕು. ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಎಸ್ಐಒ ತಾಲೂಕು ಅಧ್ಯಕ್ಷ ಮುಜ್ತಾಹಿದ್ ಓಮರ್ ಖುರೇಶಿ ಮಾತನಾಡಿ, ಶಿಕ್ಷಣವು ಎಲ್ಲರಿಗೂ ಸಮಾನವಾಗಿ ದೊರೆಯಬೇಕಾದ ಹಕ್ಕಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವ ಯಾವುದೇ ವ್ಯವಸ್ಥೆಯನ್ನು ದೇಶದ ಯುವಜನತೆ ಒಪ್ಪುವುದಿಲ್ಲ, ಎನ್ಟಿಎ ರದ್ದು ಪಡಿಸಬೇಕು. ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆ ಮಾಡಬೇಕು. ಪಾರದರ್ಶಕ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿ ರಾಜೇಶ್ವರಿ ವರ್ದನ್, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂದೀಪ್ ಮುಖುಂದೆ. ಎಸ್ವೈಎಂ ರಾಜ್ಯ ಕಾರ್ಯದರ್ಶಿ ಅಸದ್ ಉಲ್ಲಾ ಖಾನ್, ಎಪಿಸಿಆರ್ ರಿಯಾಜ್ ಪಟೇಲ್, ಜಮಾತೆ ಇಸ್ಲಾಮಿ ಹಿಂದ್ ಪ್ರತಿನಿಧಿ ಜುಲ್ಫಿಕಾರ್ ಚಾಬುಕಸವಾರ. ಜಿಐಒ ಪ್ರತಿನಿಧಿ ಜೋಹಾ ಹಾಗೂ ಪ್ರಮುಖರು ಮಾತನಾಡಿದರು. ಜಾವೇದ್ ಮತೀನ್, ಸುಶೀಲ ಅವಸ್ಥಿ ಇತರರು ಭಾಗವಹಿಸಿದ್ದರು.