ಬೆಂಗಳೂರು: ಮಳೆ ಕೊರತೆ ಎದುರಿಸುತ್ತಿರುವ ರಾಜಧಾನಿಯ ಹಲವೆಡೆ ಗುರುವಾರವೂ ಮಳೆಯಾಯಿತು.
ಕೆಲ ದಿನಗಳಿಂದ ಮಳೆಗಾಲದಲ್ಲಿಯೇ ಬಿಸಿಲ ವಾತಾವರಣ ಇತ್ತಾದರೂ 2 ದಿನಗಳಿಂದ ತಂಪಾದ ವಾತಾವರಣ ಕಂಡುಬಂದಿತ್ತು. ಗುರುವಾರ ಬೆಳಗ್ಗೆಯೇ ನಗರದ ಅಲ್ಲಲ್ಲಿ ಮಳೆ ಬಿತ್ತು.
ಮಳೆಯಿಂದಾಗಿ ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆಯಲ್ಲಿದ್ದ ಮಹಿಳೆಯರು, ಖರೀದಿಗೆಂದು ಮಾರುಕಟ್ಟೆಗೆ ಹೊರಟಿದ್ದವರಿಗೆ ತೊಂದರೆಯಾಯಿತು. ಕೆಲವರು ಮಳೆಯಲ್ಲಿಯೇ ಮಾರುಕಟ್ಟೆಗೆ ತೆರಳಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿ ಖರೀದಿಸಿದರು. ಕಚೇರಿಗೆ ಹೋಗುವವರು, ಶಾಲೆಗೆ ಹೊರಟವರು ಮಳೆಯಲ್ಲಿಯೇ ನೆನೆದು ತೆರಳಿದರು.
ಕೆಂಪೇಗೌಡ ಬಸ್ ನಿಲ್ದಾಣ, ಕೃಷ್ಣರಾಜೇಂದ್ರ ಮಾರುಕಟ್ಟೆ, ಚಾಮರಾಜಪೇಟೆ, ಚಿಕ್ಕಪೇಟೆ, ಕಾಟನ್‌ಪೇಟೆ, ಶಾಂತಿನಗರ, ವಿಧಾನಸೌಧ, ಶಿವಾಜಿನಗರ, ಕೋರಮಂಗಲ, ರಿಚ್ಮಂಡ್ ಸರ್ಕಲ್, ಶಾಂತಿನಗರ, ಜಯನಗರ, ಜೆ.ಪಿ. ನಗರ, ಜೆ.ಸಿ. ನಗರ, ಬನಶಂಕರಿ, ವಿಜಯನಗರ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಸುಬ್ರಹ್ಮಣ್ಯನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ, ಬಸವನಗುಡಿ ಮತ್ತು ಶೇಷಾದ್ರಿಪುರದಲ್ಲಿ ಸಾಧಾರಣ ಮಳೆಯಾಯಿತು.
ಈ ವೇಳೆ ಬಸ್ ನಿಲ್ದಾಣಗಳು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಕಂಡುಬಂತು. ಕೆಲ ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ಸವಾರರು ಪರದಾಡಿದರು. ಮೈಸೂರು ರಸ್ತೆ, ಹೆಬ್ಬಾಳ ರಸ್ತೆ ಸೇರಿ ಹಲವೆಡೆ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ಮಳೆಯಿಂದಾಗಿ ಉಷ್ಣಾಂಶ ಇಳಿಮುಖವಾಗಿತ್ತು.
ಮುಂದುವರಿಕೆ:
ನಗರದ ಹಲವೆಡೆ ಸುರಿಯುತ್ತಿರುವ ಮಳೆ, ಮುಂದಿನ 5 ದಿನ ಮುಂದುವರಿಯಲಿದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಡಿ.ಸೆ. ಮತ್ತು 21 ಡಿ.ಸೆ. ಉಷ್ಣಾಂಶ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.