ಎಫ್ಐಡಿ ಗೊಂದಲ ಸರಿಪಡಿಸಬೇಕು ಮತ್ತು ಯೂರಿಯಾ ಗೊಬ್ಬರ ಸಮರ್ಪಕವಾಗಿ ಲಭ್ಯವಿರುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಜಂಟಿಯಾಗಿ ವಡಗೇರಾ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಮಲ್ಲನಗೌಡ ಎಸ್.ಹಗರಟಗಿ, ಶರಣು ಜಡಿ, ವಿದ್ಯಾಧರ ಬಿ.ಜಾಕಾ,ತಿರುಮಲ, ಶಿವುಶರಣಪ್ಪ ಸಾಹುಕಾರ, ಬಸ್ಸಯ್ಯ ಸ್ವಾಮಿ ಇತರರಿದ್ದರು.
ವಡಗೇರಾ: ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಎಫ್ಐಡಿ ವ್ಯವಸ್ಥೆಯಿಂದ ರೈತರಿಗೆ ರಸಗೊಬ್ಬರ ಖರೀದಿಯಲ್ಲಿ ಅನೇಕ ತೊಂದರೆ ಎದುರಾಗುತ್ತಿದ್ದು, ಕೂಡಲೇ ಈ ಕ್ರಮ ಕೈಬಿಡಬೇಕು. ಇಲ್ಲದಿದ್ದರೆ ಕೂಡಲೇ ಸರಳೀಕರಣಗೊಳಿಸಬೇಕು ಎಂದು ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
ವಡಗೇರಾ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಮಂಗಳವಾರ ತಹಸೀಲ್ದಾರ್ಗೆ ಮನವಿ ಸಲ್ಲಿಸಿ ಮಾತನಾಡಿದ ಸಂದ ಜಿಲ್ಲಾಧ್ಯಕ್ಷ ಮಲ್ಲನಗೌಡ ಎಸ್.ಹಗರಟಗಿ, ರೈತರು ತಮ್ಮ ಬೆಳೆಗಳ ಅಗತ್ಯಕ್ಕನುಗುಣವಾಗಿ ಯೂರಿಯಾ ಹಾಗೂ ಇತರ ರಸಗೊಬ್ಬರಗಳನ್ನು ಖರೀದಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಎಫ್ಐಡಿ ವ್ಯವಸ್ಥೆಯಿಂದ ರಸಗೊಬ್ಬರ ವಿತರಣೆ ಗೊಂದಲಕ್ಕೆ ಕಾರಣವಾಗುತ್ತಿದ್ದು, ಹಲವಾರು ರೈತರಿಗೆ ಅಗತ್ಯ ಪ್ರಮಾಣದ ಗೊಬ್ಬರ ದೊರೆಯುತ್ತಿಲ್ಲ. ಇದರಿಂದ ಬೆಳೆಗಳ ಇಳುವರಿ ಕುಸಿಯುವ ಸಾಧ್ಯತೆ ಹೆಚ್ಚಿದ್ದು, ಕೆಲ ಬೆಳೆಗಳಿಗೆ ಹಾನಿಯಾಗುವ ಆತಂಕವೂ ಇದೆ ಎಂದು ಅವರು ಹೇಳಿದರು.
ಮಾರುಕಟ್ಟೆಯಲ್ಲಿ ಯೂರಿಯಾ ಸೇರಿದಂತೆ ಅಗತ್ಯ ರಸಗೊಬ್ಬರಗಳು ಸಮರ್ಪಕವಾಗಿ ಲಭ್ಯವಾಗುವಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರೈತರಿಗೆ ಯಾವುದೇ ತೊಂದರೆ ಆಗದಂತೆ ಸರಬರಾಜು ವ್ಯವಸ್ಥೆಯನ್ನು ಸುಗಮಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ವೇಳೆ ಶರಣು ಜಡಿ, ವಿದ್ಯಾಧರ ಬಿ ಜಾಕಾ, ತಿರುಮಲ, ಶಿವುಶರಣಪ್ಪ ಸಾಹುಕಾರ, ಬಸ್ಸಯ್ಯ ಸ್ವಾಮಿ ಇತರರಿದ್ದರು.