ಬಾದಾಮಿ ಬನಶಂಕರಿ ಕ್ಷೇತ್ರದಲ್ಲಿ ಶನಿವಾರ ನಡೆದ ದೇವಾಂಗ ಜಾಗೃತಿ ಸಮಾವೇಶವನ್ನು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸಿದರು. ದಯಾನಂದಪುರಿ ಮಹಾಸ್ವಾಮಿಗಳು, ಶಾಸಕ ಬಿ.ಬಿ.ಚಿಮ್ಮನಕಟ್ಟಿ, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮತ್ತಿತರರು ಇದ್ದರು.
ಬಾಗಲಕೋಟೆ: ಕುಲ ಕಸುಬಾದ ನೇಕಾರಿಕೆಯನ್ನೇ ಬದುಕಿನ ಉಸಿರಾಗಿಸಿಕೊಂಡು ಬಂದಿರುವ ದೇವಾಂಗ ನೇಕಾರ ಜನಾಂಗದ ಬೇಡಿಕೆಯಾದ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಅಬಕಾರಿ ಮತ್ತು ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು.
ಬಾದಾಮಿ ಪಟ್ಟಣದ ಬನಶಂಕರಿ ಕ್ಷೇತ್ರದಲ್ಲಿ ಶನಿವಾರ ಜರುಗಿದ ಅಖಿಲ ಭಾರತ ದೇವಾಂಗ ಜಾಗೃತಿ ಸಮಾವೇಶ, ದೇವಾಂಗ ಜಗದ್ಗುರು ದಯಾನಂದಪುರಿ ಮಹಾಸ್ವಾಮಿಗಳ ತುಲಾಭಾರ, 36 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಳೆಯ ಕಾಲದ ಕಾಲದ ನೇಕಾರಿಕೆ ಉಳಿವಿಗೆ ಅದೆಷ್ಟೇ ಸಬ್ಸಿಡಿ ಕೊಟ್ಟರೂ ವ್ಯರ್ಥ. ನೇಕಾರಿಕೆಯನ್ನೇ ನಂಬಿಕೊಂಡವರು ತಮ್ಮ ಉದ್ಯೋಗದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬದಲಾವಣೆಯತ್ತ ಮುಖ ಮಾಡುವುದು ಸಧ್ಯದ ಅನಿವಾರ್ಯತೆ. ಬದಲಾದ ಕಾಲಘಟ್ಟದಲ್ಲಿ ನೇಕಾರರೂ ಬೇರೆ ಉದ್ಯೋಗದತ್ತ ಹೆಜ್ಜೆಯನ್ನಿರಿಸಬೇಕು. ದೇವರು, ಧರ್ಮದ ಹೆಸರಿನಲ್ಲಿ ಮೂಢನಂಬಿಕೆಗೆ ಬಲಿಯಾಗದೇ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಶಾಸಕರಾದ ಬಿ.ಬಿ.ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಸಚಿವ ಸತೀಶ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಮಾತನಾಡುತ್ತ, ಶ್ರಮಿಕ ವರ್ಗವಾದ ನೇಕಾರರು ಭೌದ್ಧಿಕವಾಗಿ ಶ್ರೀಮಂತರು. ಆದರೆ, ರಾಜಕೀಯ, ಸಂಘಟನೆ ಮತ್ತು ಶೈಕ್ಷಣಿಕ ರಂಗದಲ್ಲಿ ಹಿಂದುಳಿದಿದ್ದಾರೆ. ಅವರನ್ನು ಮೇಲ್ಪಂಕ್ತಿಗೆ ತರುವ ಕೆಲಸ ಸರ್ಕಾರಗಳು ಮಾಡಬೇಕಿದೆ ಎಂದರು.
ಬೆಂಗಳೂರು ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಎಂ.ಪಿ.ಉಮಾಶಂಕರ, ಹಂಪಿ ಹೇಮಕೂಟ ಗಾಯತ್ರಿ ಪೀಠ ಮಹಾಸಂಸ್ಥಾನದ ಪಿ.ಆರ್.ಗಿರಿಯಪ್ಪ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆ ಬ್ರಹ್ಮವಿದ್ಯಾನಗರ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥ ಮಠದ ಪುರುಷೋತ್ತಮಾನಂದಪುರಿ ಶ್ರೀಗಳು, ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಕಾವೇರಿ ಹ್ಯಾಂಡ್ ಲೂಮ್ಸ್ ನ ಅಧ್ಯಕ್ಷ ಬಿ.ಜಿ.ಗಣೇಶ, ಪ್ರಮುಖರಾದ ಅಶೋಕ ಹನಬರಟ್ಟಿ, ಎಂ.ಬಿ.ಹಂಗರಗಿ, ಮುರುಗೇಶ ಕಡ್ಲಿಮಟ್ಟಿ, ನಾರಾಯಣಸ್ವಾಮಿ, ಗೋ ತಿಪ್ಪೇಶ, ಬಸವರಾಜ ಕುಂಬಳಾವತಿ, ಊರುಕೆರೆ ದಯಾನಂದ, ಆನಂದ ಹುಲಮನಿ, ಎನ್.ಎಸ್.ಬಾವಿಕಟ್ಟಿ, ಬಸವರಾಜ ಚಿತ್ತರಗಿ ಮತ್ತಿತರರು ಇದ್ದರು.
ಭಾವನಾತ್ಮಕ ಮೆಲುಕು
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ಸಂಘಟನೆ, ಶಿಕ್ಷಣ ಮತ್ತು ಹೋರಾಟ ಎಂಬ ಪದದ ಅರ್ಥ ಗೊತ್ತಿಲ್ಲದ ನಮ್ಮ ದೇವಾಂಗ ಜನಾಂಗ ಹಸಿವಿನ ತೃಷೆಯನ್ನು ನೀಗಿಸುವ ನಿಟ್ಟಿನಲ್ಲಿ ಎಳೆಗಿಂತ ಸಣ್ಣಾಗಿ ಬದುಕಿನ ದೋಣಿಯನ್ನು ಸಾಗಿಸಲು ಹೈರಾಣಾಗಿದೆ. ಇಂಥ ಸಂದಿಗ್ಧತೆಯಲ್ಲಿ ನಮ್ಮ ಪಾಲಿನ ರಾಜಕೀಯ ಸ್ಥಾನಮಾನವನ್ನು ಹಕ್ಕಿನಿಂದ ಕೇಳಲೂ ನಮ್ಮಲ್ಲಿ ಧ್ವನಿ ಇಲ್ಲದಂತಾಗಿದೆ. ನಮ್ಮ ಅಸಂಘಟಿತ ಸಂದಿಗ್ಧತೆಯನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಸರ್ಕಾರಗಳು ನಮಗೆ ರಾಜಕೀಯದಲ್ಲಿ ಸೂಕ್ತವಾದ ಸ್ಥಾನಮಾನ ನೀಡಲು ನಿರಾಸಕ್ತಿ ವಹಿಸಿವೆ. ಕೈಮಗ್ಗ, ವಿದ್ಯುತ್ ಮಗ್ಗಗಳ ನಿಗಮಗಳಿಗೂ ನಮ್ಮ ಜನಾಂಗವನ್ನು ಪರಿಗಣಿಸದೇ ಅನನುಭವಿಗಳಿಗೆ ಮಣೆ ಹಾಕುತ್ತಿವೆ. ಯಾಕೆ ನಮಗೂ ರಾಜಕೀಯ ಸ್ಥಾನಮಾನ ಬೇಡವೇ..? ಶಾಸಕರ ಆಯ್ಕೆಯಲ್ಲಿ ನಮ್ಮ ಸಮಾಜದ ಪಾತ್ರ ಏನೂ ಇಲ್ಲವೇ...? ಎಂದು ಭಾವನಾತ್ಮಕವಾಗಿ ಮಾತನಾಡಿದರು.
ದಯಾನಂದಪುರಿ ಶ್ರೀಗಳಿಗೆ ತುಲಾಭಾರ
ಸಮಾವೇಶದ ಕೇಂದ್ರ ಬಿಂದುವಾಗಿದ್ದ ದಯಾನಂದಪುರಿ ಮಹಾಸ್ವಾಮಿಗಳ 36 ನೇ ಪಟ್ಟಾಧಿಕಾರ ಮಹೋತ್ಸವದ ನಿಮಿತ್ತವಾಗಿ ಬೆಳ್ಳಿ ಕಿರೀಟಧಾರಣೆ ಮಾಡಿ ಧಾನ್ಯಗಳಿಂದ ತುಲಾಭಾರ ಮಾಡಲಾಯಿತು. ಇದಕ್ಕೂ ಮೊದಲು ಬಾದಾಮಿ ಪಟ್ಟಣದಿಂದ ಬನಶಂಕರಿ ಕ್ಷೇತ್ರದವರೆಗೆ ದಯಾನಂದಪುರಿ ಮಹಾಸ್ವಾಮಿಗಳ ಅದ್ಧೂರಿ ಮೆರವಣಿಗೆಯನ್ನು ನಡೆಸಲಾಯಿತು. ಈ ವೇಳೆ ಮುತೈದೆಯರ ಕುಂಭಮೇಳ, ವಿವಿಧ ವಾಧ್ಯಮೇಳಗರ ರಸದೌತಣ, ಜಾನಪದ ಕಲಾತಂಡಗಳ ಬೊಂಬೆ ಕುಣಿತ, ದೇವಾಂಗ ಕುಲ ಬಾಂಧವರ ಹಳದಿ ಶಾಲು, ಟೊಪ್ಪಿಗೆ ಮೆರವಣಿಗೆಗೆ ಮೆರಗು ತಂದವು.
ಸಿಎಂ, ಸಚಿವ, ಶಾಸಕರ ಗೈರು ; ನಿರಾಸೆ
ಸಮಾವೇಶದಲ್ಲಿ ಭಾಗವಹಿಸಬೇಕಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಆದಿಯಾಗಿ ಬಹುತೇಕ ಸಚಿವರು, ಹಾಲಿ-ಮಾಜಿ ಶಾಸಕರ ಗೈರು ಹಾಜರಿ ಎದ್ದು ಕಾಣುವಂತಿತ್ತು. ನಾಡಿನ ದೊರೆ ಆದಿಯಾಗಿ ಮಂತ್ರಿ ಮಹೋದಯರು ನಮ್ಮ ದೇವಾಂಗ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ನಮ್ಮ ಸಮಸ್ಯೆ, ಸವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡಬಲ್ಲರು ಎಂಬ ಆಶಾಭಾವ ಹೊತ್ತು ರಾಜ್ಯ, ಅಂತರಾಜ್ಯಗಳಿಂದ ತಂಡೋಪತಂಡವಾಗಿ ಬಂದಿದ್ದ ದೇವಾಂಗ ಜನತೆಗೆ ನಿರಾಸೆಯಾಯಿತು.