

ಸೇಡಂ: ಯುವ ಪತ್ರಕರ್ತರು ಕೇವಲ ಕಾರ್ಯಕ್ರಮಗಳ ಸುದ್ದಿಗೆ ಆದ್ಯತೆ ನೀಡದೆ, ಜನಪರ ಮತ್ತು ಸಮಾಜಮುಖಿ ಸುದ್ದಿಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ವಿ.ಎನ್.ಕಾಗಲಕರ್ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು. ಪತ್ರಿಕಾ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂದಿಂದ ಶನಿವಾರ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸೇಡಂ ನೆಲದಲ್ಲಿ ಸಹಕಾರ ಹಾಗೂ ಸೌಹಾರ್ದತೆಯ ವಾತಾವರಣವಿದ್ದು, ಈ ನೆಲದ ಅನೇಕ ಪ್ರತಿಭೆಗಳಿಗೆ ಪ್ರಶಸ್ತಿ ಒಲಿದು ಬರುತ್ತಿವೆ. ಅವರ ಕಾರ್ಯವು ಜಿಲ್ಲೆ ಸೇರಿ ರಾಜ್ಯಮಟ್ಟದವರೆಗೂ ಗುರುತಿಸುವಂತಾಗಿರುವುದು ಗಮನಾರ್ಹ ಸಂಗತಿ ಎಂದರು. ಕುಮಾರ ಶ್ರೀ ಪ್ರಶಸ್ತಿ ಪುರಸ್ಕೃತ ಮಹಿಪಾಲರೆಡ್ಡಿ ಮುನ್ನೂರ, ವಿ.ಎನ್.ಕಾಗಲಕರ್ ಪ್ರಶಸ್ತಿ ಪುರಸ್ಕೃತ ದೇವೇಂದ್ರಪ್ಪ ಅವಂಟಿ, ಕಾರ್ಯನಿರತ ಪತ್ರಕರ್ತ ಸಂದ ಜಿಲ್ಲಾ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಶರಣು ಮಹಾಗಾಂವ್, ಪಾಟೀಲ್ ಪುಟ್ಟಪ್ಪ ಪ್ರಶಸ್ತಿ ಪುರಸ್ಕೃತ ಸಿದ್ದಯ್ಯಸ್ವಾಮಿ ಆಡಕಿ ಮಾತನಾಡಿದರು. ತಾಲೂಕು ಉಪಾಧ್ಯಕ್ಷ ಜಗನ್ನಾಥ ತರನಳ್ಳಿ, ಗೌರವ ಸಲಹೆಗಾರ ನಾಗಯ್ಯಸ್ವಾಮಿ ಬೊಮ್ನಳ್ಳಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸುಧೀರ ಬಿರಾದಾರ, ಕಾರ್ಯದರ್ಶಿ ಅವಿನಾಶ ಬೋರಂಚಿ, ರಾಧಾಕೃಷ್ಣ, ಗಣೇಶ ನೀಲಹಳ್ಳಿ, ಬಸನಗೌಡ ಮದ್ನಿ, ಭೀಮರಾವ ಹಲಕರ್ಟಿ ಇದ್ದರು.