ಆ.5ಕ್ಕೆ ಅರ್ಚಕರ ಸಮಾವೇಶ

ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ
ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ
Published on

ಪ್ರಮುಖ ಮುಖ್ಯಾಂಶಗಳು

  • * ರಾಮಲಿಂಗಾರೆಡ್ಡಿ ಅವರಿಗೆ ಅಭಿನಂದನಾ ಸಮಾರಂಭ
  • * ಅರ್ಚರ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಬೆಂಗಳೂರು: ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘವು ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆ.5ರಂದು ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಸಮಾವೇಶ ಹಾಗೂ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀವತ್ಸ, ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಈ ಹಿಂದೆ ಮುಜರಾಯಿ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರು ಅರ್ಚಕರ ಎಲ್ಲ ಸಮಸ್ಯೆಗಳಿಗೂ ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಹಲವು ಬೇಡಿಕೆಗಳನ್ನು ಈಡೇರಿಸಿದ್ದರು. ಆದ್ದರಿಂದ ರಾಜ್ಯದ 35 ಸಾವಿರ ದೇವಾಲಯಗಳ ಅರ್ಚಕರು ಅವರನ್ನು ‘ಅರ್ಚಕರ ಕಣ್ಮಣಿ’ ಎಂದು ಕರೆಯುತ್ತಿದ್ದಾರೆ. ಹಾಗಾಗಿ ಸಮಾವೇಶದಲ್ಲಿ ಅವರಿಗೆ ಅಭಿನಂದಿಸಲಾಗುವುದು ಎಂದು ತಿಳಿಸಿದರು.

ಬೇಡಿಕೆಗಳ ಈಡೇರಿಕೆಗೆ ಆಗ್ರಹ:

- ತಸ್ತೀಕ್ ಪಡೆಯುವ ಅರ್ಚಕರಿಗೆ ಮಾಸಿಕ 10 ಸಾವಿರ ಗೌರವ ಧನ ನೀಡಬೇಕು. 65 ವರ್ಷ ದಾಟಿದ ಅರ್ಚಕರಿಗೆ ಮಾಸಿಕ 5 ಸಾವಿರ ಪಿಂಚಣಿ ನೀಡಬೇಕು. ಮುಂಬರುವ ಬಜೆಟ್‌ನಲ್ಲಿ ತಸ್ತೀಕ್ ಮೊತ್ತವನ್ನು 72 ಸಾವಿರದಿಂದ 1.20 ಲಕ್ಷಕ್ಕೆ ಹೆಚ್ಚಿಸಬೇಕು. ಶಿಥಿಲಗೊಂಡಿರುವ ಮುಜರಾಯಿ ದೇವಾಲಯಗಳ ಜೀರ್ಣೋದ್ದಾರ ಮಾಡಲು ಹೆಚ್ಚಿನ ಅನುದಾನ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ವಿ. ರಾಮತೀರ್ಥ, ಪದಾಧಿಕಾರಿಗಳಾದ ಕೆ.ಎಸ್. ಮಾರುತಿ, ಟಿ.ಪಿ. ಮಲ್ಲಿಕಾರ್ಜುನಯ್ಯ, ವಿಜೇಂದ್ರಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net