ಇಂದು ಪೋಕ್ಸೋ ಪ್ರಕರಣದ ತೀರ್ಪು ಪ್ರಕಟ: ಕೆಲವೇ ಗಂಟೆಗಳಲ್ಲಿ ಮುರುಘಾ ಶ್ರೀ ಭವಿಷ್ಯ ನಿರ್ಧಾರ! Muruga Shree

ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀ
ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀ
Published on

ಪ್ರಮುಖ ಮುಖ್ಯಾಂಶಗಳು

  • ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕೇಸ್​
  • ಮುರುಘಾ ಶ್ರೀ ಪಾಲಿಗೆ ಇಂದು ಮಹತ್ವದ ದಿನವಾಗಿದೆ
  • ಇಂದು ಮಧ್ಯಾಹ್ನ 2.45ಕ್ಕೆ ಚಿತ್ರದುರ್ಗ ನ್ಯಾಯಾಲಯದಿಂದ ತೀರ್ಪು ಪ್ರಕಟ
  • ಇಂದು ನಿರ್ಧಾರವಾಗಲಿದೆ ಶಿವಮೂರ್ತಿ ಮುರುಘಾ ಶರಣರ ಭವಿಷ್ಯ
ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ವಿಚಾರಣೆ ಎದುರಿಸಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀ ( Muruga Shree ) ಗೆ ಇಂದು ಮಹತ್ವದ ದಿನವಾಗಿದೆ. ಏಕೆಂದರೆ, ಇಂದು ಚಿತ್ರದುರ್ಗದ 2ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.
ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಮುರುಘಾ ಶ್ರೀ ಕೋರ್ಟಿಗೆ ಹಾಜರಾಗಿದ್ದು, ಇಂದು ಮಧ್ಯಾಹ್ನ 2.45ಕ್ಕೆ ಭವಿಷ್ಯ ನಿರ್ಧಾರವಾಗಲಿದೆ.
ಅಂದಹಾಗೆ, ಮುರುಘಾ ಮಠದ ಪೀಠಾಧ್ಯಕ್ಷರಾಗಿದ್ದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ 2022, ಆಗಸ್ಟ್​ 26ರಂದು ಮೈಸೂರಿನಲ್ಲಿ ಫೋಕ್ಸೋ ಕೇಸ್ ದಾಖಲಾಯಿತು. ನಗರದ ನಜರಬಾದ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಬಾಲಕಿಯರು ದೂರು ದಾಖಲಿಸಿದರು. ಬಳಿಕ ಈ ಪ್ರಕರಣವನ್ನು 2022, ಆಗಸ್ಟ್​ 27ಕ್ಕೆ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಯಿತು.
ಪ್ರಕರಣ ವರ್ಗಾವಣೆಯಾದ ಬೆನ್ನಲ್ಲೇ ತನಿಖೆ ಕೈಗೆತ್ತಿಕೊಂಡ ಚಿತ್ರದುರ್ಗ ಪೊಲೀಸರು 2022, ಸೆಪ್ಟೆಂಬರ್ 1ರಂದು ಮುರುಘಾ ಶ್ರೀಗಳನ್ನು ಬಂಧಿಸಿದರು. ಶ್ರೀಗಳು ಬಂಧನದಲ್ಲಿ ಇರುವುವಾಗಲೇ 2022ರ ಅ.13ಕ್ಕೆ 2ನೇ ಫೋಕ್ಸೋ ಪ್ರಕರಣ ಅವರ ವಿರುದ್ಧ ದಾಖಲಾಯಿತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಜಾರ್ಜ್​ಶೀಟ್ ಸಲ್ಲಿಕೆ ಮಾಡಿದರು.
ಪೋಕ್ಸೋ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ 2023ರ ನ.16ರಂದು ಮುರುಘಾ ಶ್ರೀ ಜಾಮೀನಿನ ಮೇಲೆ ಬಿಡುಗಡೆಯಾದರು. ಬಳಿಕ 2024, ಏಪ್ರಿಲ್​ 23ರಂದು ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಜಾಮೀನು ರದ್ದಾಗಿ ಮತ್ತೆ ಬಂಧನವಾದರು. ಕೇವಲ 3 ತಿಂಗಳಲ್ಲಿ ಸಾಕ್ಷಿ ವಿಚಾರಣೆ ನಡೆಸಿ ಎಂದು ಗಡುವು ನೀಡಿ, ಜಾಮೀನು ರದ್ದು ಮಾಡಲಾಯಿತು. ಬಳಿಕ 2024, ಅಕ್ಟೋಬರ್ 7ರಂದು ಚಿತ್ರದುರ್ಗ ನ್ಯಾಯಾಲಯ ಪೋಕ್ಸೋ ಕೇಸ್‌ನಲ್ಲಿ ಸಾಕ್ಷ್ಯಗಳ ಸಂಗ್ರಹಣೆ ಪೂರ್ಣಗೊಂಡ ನಂತರ ಮತ್ತೆ ಜಾಮೀನು ನೀಡಲಾಯಿತು. 2025, ಜುಲೈ 3ರಂದು ಚಿತ್ರದುರ್ಗ ನ್ಯಾಯಾಲಯದಲ್ಲಿ ತಮ್ಮ 313 ಹೇಳಿಕೆಯನ್ನು ನೀಡಿ, ಜಿಲ್ಲೆಯನ್ನು ಬಿಟ್ಟು ದಾವಣಗೆರೆಗೆ ಹೊರಟರು.
ಇನ್ನು ತನಿಖಾಧಿಕಾರಿಗಳು ಇಬ್ಬರು ಸಂತ್ರಸ್ತ ಬಾಲಕಿಯರ ಪ್ರತ್ಯೇಕ ಜಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಸಂತ್ರಸ್ತ ಬಾಲಕಿಯರ ಪರವಾಗಿ ಸರ್ಕಾರಿ ಅಭಿಯೋಜಕ HR ಜಗದೀಶ್ ವಾದ ಮಂಡಿಸಿದ್ದಾರೆ. ಮುರುಘಾ ಶರಣರ ಪರ ಹೈಕೋರ್ಟ್ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದಾರೆ. ವಾದ- ಪ್ರತಿವಾದ ಆಲಿಸಿರುವ ನ್ಯಾಯಾಲಯದಿಂದ ಇಂದು ತೀರ್ಪು ಪ್ರಕಟವಾಗಲಿದೆ. ನ್ಯಾಯಾಧೀಶರಾದ ಜಿಸಿ ಹಡಪದ ಅವರಿಂದ ತೀರ್ಪು ಹೊರ ಬೀಳಲಿದೆ.
ಅಂದಹಾಗೆ, ಈ ಪೋಕ್ಸೋ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಎ1 ಆರೋಪಿಯಾಗಿದ್ದರೆ, ವಾರ್ಡನ್ ರಶ್ಮಿ ಎ2 ಹಾಗೂ ಮಠದ ಮ್ಯಾನೇಜರ್ ಪರಮಶಿವಯ್ಯ ಎ4 ಆಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net