ಸ್ಮೃತಿ ಮಂಧಾನಗೆ ಕೈ ಕೊಟ್ರಾ ಪಲಾಶ್​ ಮುಚ್ಚಲ್​? ಮದುವೆಯ ಹಿಂದಿನ ರಾತ್ರಿ ನಡೆದಿದ್ದೇನು? Smriti Mandhana

ಟೀಮ್​ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧಾನ
ಟೀಮ್​ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧಾನ
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
  • ಮದುವೆ ಮುಂದೂಡಿಕೆ ವಿಚಾರದಲ್ಲಿ ದಿನಕ್ಕೊಂದು ತಿರುವು ಸಿಗುತ್ತಿದೆ
  • ಸ್ಮೃತಿ ಮದುವೆ ನಡೆಯುತ್ತೋ? ಅಥವಾ ನಡೆಯುವುದಿಲ್ಲವೋ? ಎಂಬ ಅನುಮಾನ ಮೂಡಿದೆ
ಮುಂಬೈ: ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿರುವ ಜೋಡಿ ಅಂದರೆ ಅದು ಟೀಮ್​ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧಾನ ( Smriti Mandhana ) ಮತ್ತು ಸಂಗೀತ ನಿರ್ದೇಶಕ ಪಲಾಶ್​ ಮುಚ್ಚಲ್ ಜೋಡಿ. ಈ ತಾರಾ ಜೋಡಿಯ ಮದುವೆ ನ.23ರಂದು ನಡೆಯಬೇಕಿತ್ತು. ಆದರೆ, ಸ್ಮೃತಿ ತಂದೆಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿದೆ. ಆದರೆ, ಸದ್ಯ ಪರಿಸ್ಥಿತಿ ಹೇಗಿದೆ ಅಂದರೆ, ಸ್ಮೃತಿ ಮದುವೆ ನಡೆಯುತ್ತೋ? ಅಥವಾ ನಡೆಯುವುದಿಲ್ಲವೋ? ಎನ್ನುವಂತಿದೆ.
ಸ್ಮೃತಿ ಮದುವೆ ಮುಂದೂಡಿಕೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಹೊಸ ಹೊಸ ಸಂಗತಿಗಳು ಹೊರ ಬೀಳುತ್ತಿವೆ. ಸ್ಮೃತಿ ತಂದೆಗೆ ಹೃದಯಾಘಾತ ಆಗಿತ್ತು ಅನ್ನೋದೆ ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ, ಪಲಾಶ್​ ಮುಚ್ಚಲ್​ ಆಸ್ಪತ್ರೆ ಸೇರಿರುವುದು ಕೂಡ ನಾಟಕ ಎನ್ನಲಾಗುತ್ತಿದೆ. ಎರಡೂ ಕುಟುಂಬಗಳ ನಡುವೆ ಎಲ್ಲವೂ ಸರಿ ಇಲ್ಲ. ಮದುವೆ ಮುಂದೂಡಲು ಬೇರೆಯದ್ದೇ ಕಾರಣ ಇದೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಆದರೆ, ಇದೆಲ್ಲ ಸದ್ಯಕ್ಕೆ ವದಂತಿಗಳಷ್ಟೇ. ಈ ಬಗ್ಗೆ ಎರಡೂ ಕುಟುಂಬದಲ್ಲಿ ಯಾರೊಬ್ಬರು ಯಾವುದೇ ಹೇಳಿಕೆಗಳನ್ನು ನೀಡಿಲ್ಲ.
ಅಂದಹಾಗೆ, ಮಹಾರಾಷ್ಟ್ರ ಮೂಲದ ಸ್ಮೃತಿ ಮಂಧಾನ, ಇಂದೋರ್‌ ಮೂಲದ ಪಲಾಶ್ ಮುಚ್ಚಲ್ ಅವರೊಂದಿಗೆ 2019ರಿಂದಲೂ ಡೇಟಿಂಗ್ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದರು. ಸ್ಮೃತಿ ಅವರು ಟೀಮ್​ ಇಂಡಿಯಾದ ಆರಂಭಿಕ ಆಟಗಾರ್ತಿ ಮತ್ತು ಉಪನಾಯಕಿಯಾಗಿದ್ದರೆ, ಪಲಾಶ್ ಮುಚ್ಚಲ್​ ಬಾಲಿವುಡ್‌ನಲ್ಲಿ ಸಂಗೀತ ನಿರ್ದೇಶಕನಾಗಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ.
2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಟೀಮ್​​ ಇಂಡಿಯಾ ಚಾಂಪಿಯನ್ ಆದ ಬಳಿಕ ಸ್ಮೃತಿ ಅವರ ವಿವಾಹದ ಸುದ್ದಿ ಮುನ್ನೆಲೆಗೆ ಬಂದಿತು. ಇತ್ತೀಚೆಗೆ, ಸ್ಮೃತಿ ಅವರು ತಮ್ಮ ಸ್ನೇಹಿತೆಯರೊಂದಿಗೆ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ತೋರಿಸುವ ಮೂಲಕ ನಿಶ್ಚಿತಾರ್ಥವನ್ನು ದೃಢಪಡಿಸಿದರು. ಇದಾದ ಬಳಿಕ ವಿಶ್ವಕಪ್ ಗೆದ್ದ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಲಾಶ್ ಅವರು ಸ್ಮೃತಿಗೆ ಪ್ರಪೋಸ್ ಮಾಡಿ ಅಚ್ಚರಿ ಮೂಡಿಸಿದರು. ನಂತರ, ಹಲ್ದಿ ಮತ್ತು ಸಂಗೀತ ಆಚರಣೆಯ ಸಮಯದಲ್ಲಿ ಇಬ್ಬರು ಜೊತೆಯಾಗಿ ಹೆಜ್ಜೆ ಹಾಕಿದರು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದವು. ನವೆಂಬರ್ 23 ರಂದು ಮದುವೆ ನಡೆಯಬೇಕಿತ್ತು. ಆದರೆ, ಸಂಜೆಯೊತ್ತಿಗೆ ಇಡೀ ಚಿತ್ರಣವೇ ಬದಲಾಯಿತು. ಮದುವೆಯನ್ನು ಮುಂದೂಡಲಾಗಿದೆ ಎಂಬ ಸುದ್ದಿ ಹೊರಬಿತ್ತು.
ತಂದೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ನಂತರ, ಸ್ಮೃತಿ ಅವರು ತನ್ನ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಕೇಳಿಕೊಂಡಿದ್ದಾರೆ. ಹೀಗಾಗಿ ಮದುವೆಯನ್ನು ಮುಂದೂಡಲಾಗಿದೆ ಎಂದು ಅವರ ಮ್ಯಾನೇಜರ್ ಬಹಿರಂಗಪಡಿಸಿದ್ದಾರೆ. ಅದಾದ ನಂತರ, ಪಲಾಶ್ ಕೂಡ ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗಿದರು. ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದರ ನಡುವೆ ಅನೇಕ ನೆಟ್ಟಿಗರು ಜಾಲತಾಣದಲ್ಲಿ ಸಂಚಲನಾತ್ಮಕ ಸಂಗತಿಗಳನ್ನು ಮುನ್ನೆಲೆಗೆ ತಂದರು. ಪಲಾಶ್ ಅವರು ಮೇರಿ ಡಿ'ಕೋಸ್ಟಾ ಎಂಬ ನೃತ್ಯ ನಿರ್ದೇಶಕಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹರಿಬಿಡಲಾಯಿತು. ಅಲ್ಲದೆ, ಪಲಾಶ್​ ಮತ್ತು ಮುಚ್ಚಲ್​ ಚಾಟ್​ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್‌ಗಳನ್ನು ಸಹ ಹರಿಬಿಡಲಾಯಿತು. ಇದರಲ್ಲಿ ಪಲಾಶ್ ಅವರು ಸ್ಮೃತಿಯ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆಕೆ ತನಗೆ ಸರಿಯಾಗಿ ಟೈಂ ಕೊಡುತ್ತಿಲ್ಲ ಎಂದು ಪಲಾಶ್​ ಹೇಳಿಕೊಂಡಿದ್ದಾರೆ. ಅಲ್ಲದೆ, ತನ್ನೊಂದಿಗೆ ಡೇಟ್​ ಮಾಡುವಂತೆ ಪಲಾಶ್​ ಕೇಳಿಕೊಂಡಿದ್ದಾರೆ. ಆದರೆ, ವೈರಲ್​ ಆಗಿರುವ ಸ್ಕ್ರೀನ್​ಶಾಟ್​ಗಳ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಅದೊಂದು ವದಂತಿಯಾಗಿದೆ.

ಇದು ನಿಜವೇ?

ಪಲಾಶ್​ ಬಗ್ಗೆ ತಿಳಿದ ಸ್ಮೃತಿಯ ತಂದೆ ಶ್ರೀನಿವಾಸ್​ ನವೆಂಬರ್​ 22ರ ರಾತ್ರಿಯೇ ಪಲಾಶ್ ಅವರನ್ನು ಎದುರಿಸಿ, ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ದೊಡ್ಡದಾಗಿ ಜಗಳ ಜಡೆದಿದೆ. ಎರಡೂ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಶ್ರೀನಿವಾಸ್​ ಅವರಿಗೆ ಹೃದಯಾಘಾತವಾಗಿದೆ ಎಂದು ಗಾಸಿಪ್ ಹರಡುತ್ತಿದ್ದಾರೆ. ಮತ್ತೊಂದೆಡೆ, ಸ್ಮೃತಿ ಅವರು ಮದುವೆಯ ವಿಡಿಯೋಗಳನ್ನು ಡಿಲೀಟ್​ ಮಾಡಿದರು ಸಹ ಈ ಹಿಂದೆ ಪಲಾಶ್ ಅವರೊಂದಿಗೆ ತೆಗೆದುಕೊಂಡ ಎಲ್ಲಾ ಫೋಟೋಗಳನ್ನು ಹಾಗೇ ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಮೃತಿ-ಪಲಾಶ್ ನಡುವೆ ಎಲ್ಲವೂ ಚೆನ್ನಾಗಿಯೇ ಇದೆ. ಅವರಿಬ್ಬರ ಸಂಬಂಧ ಇಷ್ಟವಿಲ್ಲದವರು ಈ ರೀಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯಗಳ ಮೂಲಕ ಅವರಿಬ್ಬರ ಬೆಂಬಲಕ್ಕೆ ಅಭಿಮಾನಿಗಳು ನಿಂತಿದ್ದಾರೆ.
ಇನ್ನು ಸ್ಮೃತಿ ತಂದೆ ಚೇತರಿಸಿಕೊಂಡ ತಕ್ಷಣ ಅವರ ಮದುವೆ ನಡೆಯಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಆದಾಗ್ಯೂ, ಜಾಲತಾಣದಲ್ಲಿ ಇಷ್ಟೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದರೂ, ಎರಡೂ ಕುಟುಂಬಗಳಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ, ಪಲಾಶ್ ಅವರ ಸಹೋದರಿ, ಬಾಲಿವುಡ್ ಗಾಯಕಿ ಪಲಾಕ್ ಮುಚ್ಚಲ್, ಇನ್‌ಸ್ಟಾಗ್ರಾಮ್‌ನಲ್ಲಿ ನೆಟ್ಟಿಗರಿಗೆ ಮನವಿ ಮಾಡಿದ್ದು, "ಸ್ಮೃತಿ ಅವರ ತಂದೆಯ ಅನಾರೋಗ್ಯದ ಕಾರಣ ಮದುವೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ದಯವಿಟ್ಟು ಈ ಸಮಯದಲ್ಲಿ ನಮ್ಮ ಗೌಪ್ಯತೆಗೆ ಭಂಗ ತರಬೇಡಿ ಎಂದು ಹೇಳಿದ್ದಾರೆ. ಸದ್ಯ, ಸ್ಮೃತಿ ಮತ್ತು ಪಲಾಶ್​ ಮದುವೆ ನಡೆಯುತ್ತೋ? ಇಲ್ಲವೋ? ಅನ್ನೋ ಪ್ರಶ್ನೆ ಮಾತ್ರ ಹಾಗೇ ಉಳಿದಿದೆ. ಈ ಪ್ರಕರಣದಲ್ಲಿ ಮುಂದೆ ಏನೆಲ್ಲ ಬೆಳವಣಿಗೆಗಳು ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net