ತಾತ್ವಿಕ ಮಾತು ಪಚನವಾಗುವುದು ಕಷ್ಟ

ಪೂಜ್ಯ ಮಹಾಂತ ಸ್ವಾಮೀಜಿ
ಪೂಜ್ಯ ಮಹಾಂತ ಸ್ವಾಮೀಜಿ
Published on
ಪ್ರಭುವಾದದ್ದು, ಬಸವಣ್ಣನಾದದ್ದು, ಅಕ್ಕನಾದದ್ದು, ಉಳಿದೆಲ್ಲ ಶರಣರಾದದ್ದು ಸಾಮಾನ್ಯ ಮಾತಲ್ಲ. ವಚನಗಳನ್ನು ಹೇಳುವುದು ಸುಲಭ. ಆದರೆ ಆ ತಾತ್ವಿಕ ಮಾತುಗಳು ಪಚನವಾಗುವುದು ಕಷ್ಟದ ಕೆಲಸ. ಅವರ ಭಕ್ತಿ, ಆಚಾರ, ವಿಚಾರ, ನಿಲುವು, ಅವರ ಕಾಯಕ, ದಾಸೋಹ ಇವೆಲ್ಲ ಶಬ್ದಗಳ ಜತೆ ಆಡಿದ ಆಟವಲ್ಲ. ಆದರೆ ಅವರ ನಿಲುವಿನ ಸತ್ಯತೆಯ ಜತೆಯಲ್ಲಿ ನಮ್ಮ ಭಾವ, ಬದುಕು ಆತ್ಮೋನ್ನತಿಯ ಆನಂದದಿಂದ ಆವರಿಸಿಕೊಳ್ಳುತ್ತದೆ ಎಂದು ಮುದಗಲ್​ ಕಲ್ಯಾಣಾಶ್ರಮದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಜಯನಗರ ಬಸವ ಸಮಿತಿ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿರುವ ಆಷಾಢ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ಪರಮ ಸತ್ಯದ ಪ್ರಭುಲಿಂಗಲೀಲೆ ಕುರಿತು ಪ್ರವಚನ ನೀಡಿ, ಚಾಮರಸ ಕವಿ, ಅನುಭಾವಿ ಆಗಿ ಶರಣರ ಬದುಕಿನ ವಚನಾನುಭವದ ಸತ್ಯಗಳನ್ನು ಪ್ರಾಮಾಣಿಕವಾಗಿ ಅಧ್ಯಯನ ಮಾಡಿ ಬಲ್ಲವರು, ಭಾವುಕರು, ಶಿವಭಕ್ತಿಯ ಬಲ್ಲ ಮೂರು ವರ್ಗದ ಜನರನ್ನು ಮುಖ್ಯವಾಗಿಟ್ಟುಕೊಂಡು ಪ್ರಭುಲಿಂಗಲೀಲೆಯನ್ನು ಸಾರಸ್ವತ ಲೋಕಕ್ಕೆ ಅರ್ಪಣೆ ಮಾಡಿದ್ದಾರೆ ಎಂದರು.
ಶರಣಾರ್ಥಿಯೊಂದಿಗೆ ಆರಂಭವಾಗುವ ಈ ಕಥನಕ ಎರಡನೇ ಗತಿಯಲ್ಲಿ ಅಪರೂಪದ ಪ್ರಸಂಗ ಎಣೆಯುವ ಮೂಲಕ ಪ್ರಭುವಿನ ಲೀಲೆಯನ್ನು ವಿಸ್ತಾರಗೊಳಿಸುತ್ತಾನೆ. ಈ ಗತಿಯಲ್ಲಿ 42 ನುಡಿಗಳಿವೆ. ಕೈಲಾಸದ ವರ್ಣನೆಯಿಂದ ಆರಂಭವಾಗುತ್ತದೆ. ಪಾರ್ವತಿ& ಪತಮಾತ್ಮರ ಸಂವಾದದ ಪೌರಾಣಿಕ ಹಿನ್ನೆಲೆಯಲ್ಲಿ ಕಾವ್ಯ ಆರಂಭ ಮಾಡಿದರೂ ಉಪಯುಕ್ತ ವಿಚಾರಗಳಿವೆ. ಅದೆ ವೇಳೆಗೆ ಸತ್ಯ ಶರಣರ ಮೂಲತತ್ವಗಳಿಗೆ ಚ್ಯುತಿಯಾಗದಂತೆ ಶರಣರ ಅದ್ಭುತ ಶಕ್ತಿ ಸೂಚನಾ ಪದ್ಯದಲ್ಲಿ ವರ್ಣಿಸಿದ್ದಾನೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net